Thursday 22 May 2014

ಆಕಾಶಕ್ಕೊಂದು ಸಣ್ಣ ಏಣಿ...!!!



                        ಆಕಾಶಕ್ಕೊಂದು ಸಣ್ಣ ಏಣಿ...!!!

       
    ಘಂಟೆ ಹನ್ನೊಂದಾಗಿತ್ತು.. ಬೇಸಿಗೆಯ ಬೇಗೆಗೆ ನಿದ್ದೆ ಬರದಂತಾಗಿ ನನ್ನ ಹಾಸ್ಟೆಲ್ ನ terrace ಮೇಲೆ ತಣ್ಣನೆಯ ಗಾಳಿಯ ಮುದ ಸವಿಯಲು ಹೊರಟೆ.. ಆಗ ತಾನೇ ಮಲಗಲು ಹೊರಟ ನನ್ನ ಗೆಳತಿಯ ಒಂದು ಮಾತು ನನಗೆ ಗೊತ್ತಿಲ್ಲದೇ ನನ್ನ ಮನಸ್ಸಲ್ಲಿ strike ಆಗಿ, ನನ್ನ ಬಹಳ ಕಾಡಲು ಪ್ರಾರ೦ಭಿಸಿತ್ತು.  "ಸದ್ಯ ಇವತ್ತು ಮುಗಿತು, ಇನ್ನು ಏಳೇ ಘಂಟೆ! ಮತ್ತೇ ಆ ಸೂರ್ಯ ಹಾಜರಿರುತ್ತಾನೆ. ಕಣ್ಣು ಬಿಟ್ಟಾಗ ಮತ್ತದೇ routine life! ಅದೇ ಅಸಾಹಯಕತೆ! ಅದೇ ಬೇಸರ...!  Hmm ನಂದಿದ್ದಿದ್ದೆ ಬಿಡು, good night" ಎಂದು ಹೇಳಿದಾಗ ಬೇರೇನು ತೋಚದೆ Goodnight ಎಂದು ಮೇಲೆ ಬಂದೆ. ಕೆಲವೊಮ್ಮೆ ಬೆಳಕಿನ ಕ್ರೂರತೆಗಿಂತ, ಕತ್ತಲೆಯ ಸೌಮ್ಯತೆ ಮನಸ್ಸಿಗೆ ಎಷ್ಟು ಹಿತ ಅನ್ನಿಸುತ್ತೆ ಅಲ್ವಾ? ಅವಳು ಯಾಕೆ ಹಾಗೆ ಹೇಳಿದಳು, ಅವಳ ಮನಸಲ್ಲಿ ಕಾಡ್ತಾ  ಇರೊ ದುಖ: ಏನಿರಬಹುದು? Infact Every person has a Story ಅಂದ ಮೇಲೆ ಅವಳು ಮಾತ್ರ ಅಲ್ಲ, ಈ ರಾತ್ರಿ ಈ ಕ್ಷಣ ಇದೇ ತರ ಯೋಚನೆ ಮಾಡ್ತಾ ದಿಂಬಿನ ಮೇಲೆ ತಲೆಯೂರಿ ಮಲಗ್ತಾ ಇರೋರು ಎಷ್ಟು ಜನ ಸಿಗಬಹುದಲ್ವಾ ಈ ಭೂಮಿ ಮೇಲೆ!! ಸುಮ್ಮನೆ ಮೇಲೆ ನೋಡಿದೆ. ಅಲ್ಲೆಲ್ಲೋ ವಿಮಾನದ ಹಾರಾಟದ ದೃಶ್ಯ ಕಣ್ಣಿಗೆ ಬಿತ್ತು. ಇತ್ತ hostel ಎದುರಿನ ಗುಡಿಸಲೊಂದರಿಂದ ಒಂದು ಮಗುವಿನ ಚೀರಾಟದ ಸದ್ದು ಕೇಳಿ ಏನೆಂದು ನೋಡಲು ಕೆಳಗೆ ಇಣುಕಿದೆ...       

          ಆಕಾಶದೆತ್ತರದಲ್ಲಿ ಅದೆಲ್ಲೋ ಕಿವಿಗೆ ಕೇಳಿಸಿಯೂ ಕೇಳಿಸದಷ್ಟು ಶಬ್ದ ಮಾಡ್ತಾ ಹಾರುತ್ತಿರುವ ಆ ವಿಮಾನದ ಸುಳಿವು ಸಿಕ್ಕಿದ್ದೇ , ಆ ಮಕ್ಕಳು ಮನೆಯ ಯಾವುದೇ ಮೂಲೆಯಲ್ಲಿರಲಿ ಎಲ್ಲದನ್ನೂ ಮರೆತು, ಅಂಗಳಕ್ಕೆ ಓಡಿ ಬಂದು ಹಣೆಯ ಮೇಲೆ ಕೈ ಅಡ್ಡ ಇರಿಸಿ, ನೀಕಿ ನೀಕಿ ವಿಮಾನ ನೋಡ್ತಾ ಕೈ ಬೀಸ್ತ ಇದ್ದ ಆ ಸನ್ನಿವೇಶವನ್ನ ನೋಡ್ತಾ ನಿಂತಿದ್ದ ನನಗೆ ಹಾರುತ್ತಿರುವ ವಿಮಾನದ ಕಡೆಗೆ ಗಮನಕೊಡ್ಬೇಕೋ, ಆ ಮಕ್ಕಳ ಮುಖದಲ್ಲಿನ, ವಿಮಾನದಲ್ಲೇ ಪ್ರಯಾಣಿಸಿದಷ್ಟು ಸಂತೋಷಪಡುತ್ತಿರುವ ಆ ಖುಷಿಯನ್ನ ನೋಡುತ್ತಾ ನಿಂತಿರಬೇಕೋ ಒಂದು ಕ್ಷಣ confuse ಆಗಿ ಹೋಯ್ತು .... !!! ಈ ಥರ ಜೀವನದ ಸಣ್ಣ ಸಣ್ಣ ವಿಷಯಗಳಲ್ಲಿ ದೊಡ್ಡ ದೊಡ್ಡ ಖುಷಿಯನ್ನ ಹುಡುಕ್ತಾ ಬದುಕುತ್ತಿರುವವರು ಅದೆಷ್ಟು ಮಂದಿಯೋ ಈ ಭೂಮಿ ಮೇಲೆ...! ವಿಮಾನ ಕಣ್ಮರೆಯಾದರೂ ಅದು ಹೋದತ್ತಲೇ ನೋಡುತ್ತಾ ನಿಂತಿದ್ದ ಆ ಪುಟ್ಟ ಹುಡುಗನ ಕಣ್ಣುಗಳಲ್ಲಿ ನೂರು ಪ್ರಭೆಯ ಪ್ರತಿಫಲನವನ್ನು ಕಂಡಂತಾಗಿ ಒಮ್ಮೆ ನನ್ನ ಮನಸ್ಸು ಎಲ್ಲೋ ತೇಲಿಹೊಯ್ತು...

           "Hmmm ಪ್ರತಿಯೊಬ್ಬರ ಜೀವನದಲ್ಲೂ ಒಳ್ಳೆ ದಿನಗಳು ಬಂದೇ ಬರುತ್ತೆ , We have to just wait for that." ಅಂತ ಅನ್ನೋದೆಲ್ಲ ಕೇವಲ ಔಪಚಾರಕ್ಕೆ ಯಾರೋ ಬಿಟ್ಟು ಹೋದ ಪೊಳ್ಳು ವೇದಾಂತವೇ ಸರಿಯೇನೋ ಅಲ್ವಾ..? "ಅಕ್ಕಿ ಮೇಲೆ ಆಸೆ ನೆಂಟರ ಮೇಲೂ ಪ್ರೀತಿ " ಅನ್ನೋ ಭಾವನೆಯಲ್ಲೇ ಬಲವಂತವಾಗಿ ಆ ಆಸೆಗಳನ್ನೆಲ್ಲ ಹಿಡಿದಿಟ್ಟುಕೊಂಡು ಬದುಕುತ್ತಿರುವವರು ಅದೆಷ್ಟು ಜನ ಇದ್ದಾರೋ. ಒಂದು ಹಿಡಿ ನೆಮ್ಮದಿಗಾಗಿ ಇಡೀ ಜೀವನವನ್ನೇ ಪಣವಾಗಿಟ್ಟಿರಬೇಕು. ಆ ಸ್ವಚ್ಛಂದದ, ಅನಿಯಮಿತ ಸಂತೋಷದ ದಿನಕ್ಕಾಗಿ ಜಾತಕ ಪಕ್ಷಿಯಂತೆ ಕಾದರೂ ಕೊನೆಗೆ ಸಿಗುವುದು ಬರೀ ನಿರಾಶೆ ಮಾತ್ರಾ...!! ಕೆಲವೊಮ್ಮೆ Life ನಲ್ಲಿ ಕತ್ತಲು ಎಷ್ಟು ಘಾಡವಾಗಿ ಆವರಿಸಿರುತ್ತೆ ಅಂದ್ರೆ, ಒಂದು ಸಣ್ಣ ಬೆಳಕಿನ ಕಿಂಡಿ ಹುಡುಕುವಷ್ಟು ಶಕ್ತಿ ಕೂಡ ಉಳಿದಿರೋಲ್ಲ...!!  ಆಕಾಶ ಮುಟ್ಟುವ ಆತುರದಲ್ಲಿದ್ದೋರು ಸೂತ್ರವಿರದ ಗಾಳಿಪಟದಂತೆ ಪಾತಾಳಕ್ಕೆ ಇಳಿದು ಬಿಟ್ಟಿರ್ತೀವಿ...!

             ಯಾವುದೋ ಬಟ್ಟೆ ಅಂಗಡಿಯಲ್ಲಿ ಬಣ್ಣ ಬಣ್ಣದ ಬಟ್ಟೆ ನೋಡಿ ಇದನ್ನ ಕೊಡಿಸು ಅಂತ ಮಕ್ಕಳು ಕೇಳ್ದಾಗ, ಆ ಬಟ್ಟೆ ಚೆನ್ನಾಗಿದ್ಯಾ ಅಥವಾ ಅದು ಯಾವ colour ಅಂತ ಸಹ ನೋಡುವ ಮೊದಲೇ Price Tag ನೋಡಿ, ಅಬ್ಬಬ್ಬಾ ಅನ್ನಿಸಿ, "ಪುಟ್ಟಾ ಇದು ಚೆನ್ನಾಗಿಲ್ಲ, ನಿಂಗೆ ಚೆಂದ ಕಾಣಲ್ಲ." ಅಂತ ಹೇಳಬೇಕಾದ ಸಂಕಟದ ಪರಿಸ್ಥಿತಿಯ ಅಪ್ಪ ಅಮ್ಮಂದಿರು, parents ನ ಸೂಕ್ಷ್ಮತೆಯನ್ನ ಅರಿಯದೆ "ಛೆ ನಂಗಿಷ್ಟ ಆಗಿದ್ದು ಸಿಗಲಿಲ್ವಲ್ಲಾ" ಅನ್ನೋ ನಿರಾಶೆಯಿಂದ ಸುಮ್ಮನಾಗಿ ಬಿಡುವ ಮಕ್ಕಳು, ಕೊನೆಗೆ ಪಾಲಿಗೆ ಬಂದದ್ದು ಪಂಚಾಮೃತ ಅಂತ ಅಂದ್ಕೊಂಡು ಸುಮ್ಮನಾಗಿ ಬಿಡ್ತಾರೆ. ಕೆಲವರ ಜೀವನವನ್ನ ಆ ದೇವ್ರು ಅದೆಷ್ಟು ಕ್ರೂರವಾಗಿ ಬರೆದಿರ್ತಾನೋ....

          ಸುಮ್ಮನೆ ದಾರಿಯಲ್ಲಿ ನಡ್ಕೊಂಡು ಹೋಗಬೇಕಾದ್ರೆ, ಕೈ ಚಾಚಿ "ಒಂದು ಹೊತ್ತು ಊಟ ಮಾಡಿಲ್ಲ ಏನಾದ್ರೂ ದಾನ ಮಾಡಿ" ಎಂದು ಭಿಕ್ಷೆ ಬೇಡುವ ಆ ಪುಟಾಣಿ ಕೈಗಳನ್ನ ನೋಡ್ತಾ ಇದ್ರೆ, ಆಗ ತಾನೆ ಆ ಸಂತೆಯ ಗಿಜಿಬಿಜಿಯಲ್ಲಿ ಗುದ್ದಾಡಿಕೊಂಡು bargain ಮಾಡಿ ತಂದ ಆ ತರಕಾರಿಯನ್ನೆಲ್ಲ ಕೊಟ್ಟು ಬಿಡುವ ಮನಸ್ಸಾಗಿಬಿಡುತ್ತೆ... ಆದರೆ ಆಗಲೇ ಜೇಬು ಖಾಲಿಯಾಗಿರುವ ನೆನಪಾಗಿ ಅವರವರ ಹಣೆ ಬರಹ ಏನ್ ಮಾಡಕಾಗುತ್ತೆ ಅಂತ ಅಂದ್ಕೊಂಡು ಮುನ್ನೆಡೆದು ಬಿಡ್ತೀವಿ. Life ಕೆಲವೊಮ್ಮೆ ಅದೆಷ್ಟು ವಿಚಿತ್ರ ಸನ್ನಿವೇಶಗಳನ್ನ ಕೊಡತ್ತೆ ಅಂದ್ರೆ.... "ಪರವಾಗಿಲ್ಲ ಬಿಡು" ಅಂತ ಅದೆಷ್ಟೇ ಸಮಾದಾನ ಮಾಡಿಕೊಂಡರು, ಮನಸ್ಸಿಗೆ ಆಗುವ ಒಂಥರಾ ಇರಿಸುಮುರಿಸು ಯಾರೊಂದಿಗೂ ಹೇಳ್ಕೊಳಕ್ಕೆ ಸಾದ್ಯ ಆಗಲ್ಲ...
           
          ಇನ್ನೂ ಆಟ ಆಡ್ತಾ ಇದ್ದ ಆ ಮಗುವನ್ನು ಒಳಗಡೆ ಕರೆಯುತ್ತಿದ್ದ ಆ ತಾಯಿಯ ಕೂಗಿಗೆ ನನ್ನ ಮನಸ್ಸು ಮತ್ತೆ ವಾಸ್ತವಕ್ಕೆ ಮರಳಿತ್ತು.. ಈ ದಿನಕ್ಕೆ ವಿದಾಯ ಹೇಳಲು ಸಜ್ಜಾಗುವಂತಿದ್ದ ಆಕೆಯ ಮುಖದಲ್ಲಿನ ಆ ಕಳವಳ, ಆ ಭಗವಂತನಲ್ಲಿ ಅನೇಕ ಪ್ರಶ್ನೆಗಳನ್ನ ಕೇಳುತತ್ತಿರುವಂತೆ ಭಾಸವಾಗ್ತಾ ಇತ್ತು. "ಹೇ ಭಗವಂತ! ಇವತ್ತು ಯಾವುದೋ ವಿಷಯದಲ್ಲಿ ಒಳ್ಳೆದಾಗಿದೆ, ಅಬ್ಬಾ ಅಂತ ಸಂತೋಷ ಪಡುವಷ್ಟರಲ್ಲೇ, ಇನ್ಯಾವುದೋ ಅಸಹನೀಯ ಅನ್ನೋ ಘಟನೆಗಳು ಸಂಭವಿಸುವಂತೆ ಮಾಡ್ತೀಯ. ಮನಸ್ಸಿನಲ್ಲಿರೋ ಒಂದು ಚಿಕ್ಕ ಆಸೆಯನ್ನು ಪೂರೈಸಿಕೊಳುವುದಕ್ಕೂ ಸಾವಿರ ಸಲ ಯೋಚಿಸಬೇಕಾದ ಅನಿವಾರ್ಯತೆಯ ಜೊತೆಗೆ, ಇವತ್ತೊಂದಿನ ಹೇಗಾದ್ರು ಕಳೆದ್ರೆ ಸಾಕಪ್ಪಾ ಅನ್ನೋ ಚಿಂತೆಯಲ್ಲಿ ನಾಳೆಯ ಕನಸು ಕಮರಿ ಹೋಗುವಂತೆ ಮಾಡ್ತಿಯ... ಅಂತು ಈ ದಿನ ಮುಗೀತಪ್ಪಾ ಅಂತ ನಿಟ್ಟುಸಿರು ಬಿಡುತ್ತಿರುವಾಗಲೇ ನಾಳೆಯ Alarm ಶಬ್ದ ಮಾಡೋಕೆ ಶುರು ಮಾಡಿರುತ್ತೆ.. ಒಂದೊಂದ್ ಸಲ ಅಂತು ಈ ಜೀವನದ ಜಂಜಾಟ ಸಾಕೆನ್ನಿಸಿ ಕೂಗಿ ಕೂಗಿ ಅಳಬೇಕು ಅನ್ಸತ್ತೆ, ಆದರೆ ಆ ಅಸಾಹಯಕತೆಯ ಕಣ್ಣೀರನ್ನ ಒರೆಸೋಕೆ ಯಾರು ತಾನೇ ಬಂದಾರು ಬದುಕಿಗೆ..ಕೊನೆಗೆ ನೀನೂ ಕೂಡ...!!"

          ಆಕೆಯ ಪ್ರಶ್ನೆಗಳಿಗೆಲ್ಲ ಉತ್ತರಿಸಬೇಕಾದ ಆ ಭಗವಂತ ಮೌನಕ್ಕೆ ಶರಣಾಗಿ ಸುಮ್ಮನಾಗಿ ಬಿಟ್ಟಿದಾನೇನೋ ಅನ್ನಿಸ್ತು... ಪಾಪ ಅವನೇನು ಮಾಡಿಯಾನು?  ಈ ರೀತಿ ಅದೆಷ್ಟು ಕೋಟಿ ಜನರು ಈ ರಾತ್ರಿ, ಈ ರೀತಿ ಅಸಹಾಯಕರಾಗಿ ಪ್ರಾರ್ಥಿಸುತ್ತಿದ್ದಾರೋ ಅವನಲ್ಲಿ?

          ಏನೋ ನಿರ್ಭಾವುಕಳಾಗಿ ಒಮ್ಮೆ ಆಕಾಶದತ್ತ ಕಣ್ಣಾಡಿಸಿದೆ. ಇಷ್ಟು ಹೊತ್ತು ಮುದ ನೀಡುತಿದ್ದ ಆ ಚಂದ್ರ ಕೂಡ ಮೋಡದ ಒಳಗೊಳಗೇ ಒಂದಾಗ್ತಾ ಕಣ್ಮರೆಯಾಗ್ತಾ ಇದ್ದ ...!!!
                 
    
                                                                  - ಮೇದಿನಿ.ಎಮ್.ಭಟ್   
                                                                                  -  ನವೀನ್ ಎಸ್.ಎನ್