Wednesday 18 October 2017

ಇದು ನನ್ನ ಕಥೆ...!!

ಇದು ನನ್ನ ಕಥೆ... ನನ್ನಂತೆ ಬೇರೆ ಎಷ್ಟೊಂದು ಕಡೆಯಿಂದ ಬೆಂಗಳೂರಿಗೆ ಬಂದು ವಾಸಿಸುತ್ತಿರುವವರ ಕಥೆ. ಅಂದ್ರೆ ಇದು ನಿಮ್ಮ ಕಥೆ ಕೂಡ ಆಗಿರಬಹುದು. ಒಂದೊಮ್ಮೆ ಅನಿಸುತ್ತೆ ನಾವು ಎಲ್ಲಿಯೂ ಇಲ್ಲದವರು ಅಂತ. ನಮ್ಮೂರಿನಲ್ಲಿ ನಾನು ಊರು ಬಿಟ್ಟವನಂತಾದರೆ, ಬೆಂಗಳೂರಿನಲ್ಲಿ ಲಕ್ಷ ಜನರ ಮಧ್ಯೆ ಮತ್ತೊಬ್ಬ ವಲಸಿಗ. ನನ್ನ ಅಸ್ತಿತ್ವ ಏನು ಅನ್ನೋ ಪ್ರಶ್ನೆ ಮನಸಲ್ಲಿ ಒಮ್ಮೊಮ್ಮೆ ಮೂಡುತ್ತೆ. ನಮ್ಮೂರು ಶಿವಮೊಗ್ಗದಲ್ಲಿ ಇರೋ ಸಾಗರ. School ಮುಗಿಸಿ ಮುಂದೆ ಓದಬೇಕು ಅಂತ ಊರು ಬಿಟ್ಟಿದ್ದು ಅಷ್ಟೇ. ಅಲ್ಲಿಂದ ಇಲ್ಲಿಯವರೆಗೂ ಮತ್ತೆಂದೂ ಊರಲ್ಲಿ ಹೆಚ್ಚು ಕಾಲ ಸಮಯ ಕಳೆಯಲು ಆಗ್ಲೇ ಇಲ್ಲ. ಹಬ್ಬ ಬಂದಾಗ ಊರಿಗೆ ಹೋಗೋದು ಬಿಟ್ರೆ ಮತ್ತೆಂದೂ ಊರ್ ಕಡೆ ಹೋಗಿದ ನೆನಪೇ ಇಲ್ಲ. Time ಎಲ್ಲಿದೆ ನಮ್ಮ ಹತ್ರ? ನಿತ್ಯ ಮುಂಜಾನೆ ಎದ್ದು ರಾತ್ರಿ ಮಲಗುವ ತನಕ time ಹೇಗೆ ಓಡುತ್ತೆ ಅಂತ ಅರ್ಥನೇ ಆಗೋಲ್ಲ, ರಾತ್ರಿ 11 ಗಂಟೆ ಆಗಿಬಿಟ್ಟಿರುತ್ತೆ. ಎಲ್ಲೋ ಒಂದೊಮ್ಮೆ office ನಿಂದ ಕ್ಯಾಬ್ ನಲ್ಲಿ ಬರುವಾಗ ಅಲ್ಲೆಲ್ಲೋ ಜೊತೆಗಾರರ ಬಾಯಲ್ಲಿ ನಮ್ಮ ಕಡೆಯ ಹವ್ಯಕ ಕನ್ನಡ ಕೇಳಿಸಿದರೆ ಮಾತ್ರ ಒಮ್ಮೆಲೇ ತುಂಬಾ ಖುಷಿ ಆಗ್ಬಿಡತ್ತೆ. ರೆಕ್ಕೆ ಹಾರಿಸಿ ಎಷ್ಟೇ ಎತ್ತರ ಏರಿದರು ಬೇರಿನ ಸೆಳೆತ ಇದ್ಯಲ್ಲಾ, ಅದು ಎಂದಿಗೂ ಇದ್ದೆ ಇರುತ್ತೆ ಅನ್ನೋದು ಇದಕ್ಕೆ ಅಲ್ಲವಾ. 

ಕೆಲಸದಲ್ಲಿ ಎಷ್ಟೇ busy ಇದ್ರೂ ಹಬ್ಬ ಅಂದ್ರೆ ಮಾತ್ರ ಮೊದಲು ನೆನಪಾಗೋದು ಮನೆಯೇ. ಹಬ್ಬ ಬರ್ತಾ ಇದೆ ಅನ್ನುವಾಗ ಅಮ್ಮನಿಂದ phone ಬರೋದಂತೂ ಖಾತ್ರಿ, "ಹಬ್ಬಕ್ಕೆ ಬರ್ತಿದ್ಯಾ ತಾನೇ?" ಅಂತ ಕೇಳಲು. ಹೀಗೆ ದೀಪಾವಳಿಗೆ ಮನೆಗೆ ಹೊರಟಿದ್ದೆ. ಹಬ್ಬ ಅಂದ್ರೆ ಸಾಕು ನೋಡಿ, ಹಿಂದಿನ ದಿನ ಮಜೆಸ್ಟಿಕ್ ಬಸ್ ಸ್ಟ್ಯಾಂಡ್ನಲ್ಲೊಂದು ಖಾಯಂ traffic jam. ಅದೇ ಹೊತ್ತಿಗೆ ಮಳೆ ಸಹ ಬಂದ್ರೆ, ಅವಾಂತರ ಇದ್ದಿದ್ದೆ . ಎರಡು ಮೂರು ಗಂಟೆ ಬೆಂಗಳೂರಿನ ರಸ್ತೆಗಳಲ್ಲೇ ಕಾಲ ಕಳೆದು ಬಸ್ ಊರಾಚೆ ಹೋದಾಗ, ಆ ತಂಪು ಗಾಳಿ ಬೀಸಿದಾಗ ಆಗೋ ಖುಷಿ ಊರಿಗೆ ಹತ್ತಿರ ಆಗ್ತಾ ಇದ್ದೀನಿ ಅನ್ನೋ ಭಾವನೆ ತರಿಸುತ್ತೆ.  ಈ feeling ಇದ್ಯಲ್ಲಾ, ಇದು ನಮ್ಮಂತಹ ಊರಿಂದ ಊರು ಬಿಟ್ಟು ಮತ್ತೆಲ್ಲೋ ಇನ್ನೇನೋ ಹುಡುಕಲು ಬಂದು ಈಗ ಅದೇ ಊರಿಗೆ ಹೋಗ್ತಾ ಇರೋ ನಮಗೆ ಬಿಟ್ರೆ ಇನ್ಯಾರಿಗೂ ಅರ್ಥ ಆಗೋಲ್ಲ.  

ಬೆಳಿಗ್ಗೆ ಬಸ್ ಇಂದ ಇಳಿದು ಸಾಗರ ಬಸ್ ಸ್ಟ್ಯಾಂಡ್ ನಿಂದ ಸೀದಾ ನಮ್ಮ ಪುಟ್ಟ ಊರಿನ ಕಡೆ ಮತ್ತೊಂದು ಬಸ್ ಹಿಡಿದು ಬರಬೇಕಾದರೆ ಆ ಹಸಿರು, ನಾ ಉಸಿರಾಡುತ್ತಿದ್ದ ಗಾಳಿ, ನಮ್ಮೂರಿಗೆ ಹೋಗೋ ದಾರಿಯ ಆಸು ಪಾಸಿನ ಗದ್ದೆಯ ಸೊಬಗು ಎಲ್ಲಾ ಮನಸ್ಸಿಗೆ ತುಂಬಾ ಮುದ ನೀಡುತ್ತಿದ್ದವು. ತುಂಬಾ ಸಲ ಅನ್ನಿಸಿದೆ, ಎಲ್ಲಾ ಬಿಟ್ಟು ಊರಿಗೆ ವಾಪಸ್ ಬಂದು ಕೃಷಿ ಮಾಡುತ್ತಾ ನಮ್ಮವರ ಜೊತೆ ನೆಮ್ಮದಿಯ ಬದುಕು ಸಾಗಿಸೋಣ ಅಂತ. ನಿಮಗೂ ಬಹಳ ಸಲ ಅನ್ನಿಸಿದೆ ಅಲ್ವಾ? ಆದ್ರೆ ಮರು ಕ್ಷಣ ಅಪ್ಪ ಪ್ರತಿ ವರ್ಷ  ಹೇಳೋ  "ಈ ವರ್ಷ ಸಹ ಅಡಿಕೆ ಬೆಲೆ ಕಡಿಮೆ ಆಗಿದ್ಯೋ. ಅರ್ಧದಷ್ಟು ಬೆಳೆಗೆ ರೋಗ ಬೇರೆ ಬಂದಿತ್ತು. ಸಾಕಾಗಿ ಹೋಗಿದೆ. ಈ ಕಷ್ಟ ಎಲ್ಲಾ ನಮಗೆ ಇರಲಿ. ನೀನು ಆರಾಮಾಗಿ ಅಲ್ಲಿ ಕೆಲ್ಸ ಮಾಡು" ಅನ್ನೋ ಮಾತು ಹಾಗೂ ಬೆಂಗಳೂರಿನಲ್ಲಿ ನನ್ನದೇ ಅಂತ ಇರುವ ಏಕೈಕ car loan ನೆನಪಿಗೆ ಬರುತ್ತದೆ. ನಿಮಗೂ ಬಂದಿರುತ್ತೆ ಅಲ್ವಾ? ನನ್ನ ಮನೆಯ ಬಸ್ ಸ್ಟಾಪ್ ಮುಂದೆ ಬಸ್ ನಿಂತಾಗ ಮನಸ್ಸು ವಾಸ್ತವಕ್ಕೆ ಬಂದಿರತ್ತೆ. 

ಮನೆಗೆ ನಡೆಯೋ ಕಾಲು ದಾರಿಯಲ್ಲಿ ಮತ್ತದೇ ಬಾಲ್ಯದ ನೆನೆಪು. ಮನೆಗೆ ಬಂದ ತಕ್ಷಣ, ಕೆಲ್ಸ ಮಾಡ್ತಿದ್ದ ಅಪ್ಪ ಅಮ್ಮ ಓಡಿ ಬಂದು ನನ್ನ luggage ತೆಗೆದು ಮನೆಗೆ ಕೈ ಹಿಡಿದು ಕರೆದುಕೊಂಡು ಹೋಗುವಾಗ ಅವರ ಮುಖದಲ್ಲಿ ಇರೋ ಖುಷಿ ಮಾತ್ರ ಯಾವಾದಕ್ಕೂ ಸಾಟಿ ಆಗೋಲ್ಲ. ನಮ್ಮ ಬರುವಿಕೆಯನ್ನು ಎದರು ನೋಡುವವರ ಸಂತೋಷಕ್ಕೆ ಕಾರಣ ಆಗೋದೇ Life ಅಲ್ವಾ? Coming back to Life ಅಂತಾರಲ್ಲಾ ಹಾಗೆ. ಪ್ರತಿ ಬಾರಿ ಬಂದಾಗಲೂ ಅಮ್ಮನ standard dialogue "ಸಪೂರ ಆದಂತಿದ್ಯ. ಹೊತ್ತಿಗೆ ಸರಿ ತಿಂತಿದ್ಯ ಮತ್ತೆ?" ಹೇಳುವಾಗ ಕೆಲವೊಮ್ಮೆ recorded audio ಅನಿಸುವಂತೆ ಭಾಸ ಆಗುತ್ತೆ. ಅಮ್ಮ ಮಾಡಿಕೊಡೋ ಕಾಫಿ officeನ ಕೆಟ್ಟ machine ಕಾಫಿಯ ರುಚಿ ಮರೆಸುವಂತಿರುತ್ತೆ ಅಮೃತದಂತೆ. ಅಜ್ಜ ತಮ್ಮ ಪ್ರೀತಿನ ಸುಮ್ನೆ express ಮಾಡೋಲ್ಲ. ಕೆಲವು ಸಲ "ಬಂದ್ಯಾ?" ಅಂತ ಸಹ ಕೇಳೋಲ್ಲ. ಸುಮ್ನೆ ಬಂದು ತಬ್ಬಿ ಒಂದು ನಿಮಿಷ ಇದ್ದು ಒಳಗೆ ಹೋಗ್ಬಿಡ್ತಾರೆ ಪೂಜೆ ಮಾಡಲು. 

ಅಪ್ಪ ಊರಿನ ದೇವಸ್ಥಾನದ ಅರ್ಚಕ. ದೀಪಾವಳಿ ಅಂದ್ರೆ ನಮ್ಮೊರಲ್ಲಿ ಕೇಳ್ಬೇಕಾ? ಅದು ಅರ್ಚಕರ ಮನೆ ಬೇರೆ. ಎಣ್ಣೆ ಸ್ನಾನ, ಗೋ ಪೂಜೆ, ದೇವಸ್ಥಾನದಲ್ಲಿ ವಿಶೇಷ ಹೋಮ ಎಲ್ಲಾ ಇರುತ್ತೆ. ನಾವು ಪಟಾಕಿ ಹಚ್ಚೋದಿಲ್ಲ. ಅದೆಲ್ಲ ಚಿಕ್ಕ ಮಕ್ಕಳಾಗಿದ್ದಾಗಿನ ಒಂದು ಹುಚ್ಚಾಟ ಅಷ್ಟೇ. ಮನೆ ಮುಂದೆ ಅತ್ತೆ ಮಕ್ಕಳು ದೊಡ್ಡ ರಂಗೋಲಿ ಹಾಕ್ತಾರೆ. ನಮ್ಮ ನೆಂಟರೆಲ್ಲಾ ನಮ್ಮ ಮನೆಗೆ ಬರ್ತಾರೆ ಊಟಕ್ಕೆ. ಅಮ್ಮ, ಅತ್ತೆ, ದೊಡ್ಡಮ್ಮ ಎಲ್ಲಾ ಸೇರಿ  ಅಡಿಗೆ ಮಾಡ್ತಾರೆ. ನಾವು ಗೋ ಪೂಜೆ ನಂತರ ಮನೆ ಬಿಟ್ಟು ತೋಟ ಎಲ್ಲಾ ನೋಡಿ ಬರೋದು ಮಧ್ಯಾಹ್ನ ಊಟದ ಸಮಯಕ್ಕೆ. ಬಾಳೆ ಎಲೆ ಊಟ ತಿನ್ಬೇಕಾದ್ರೆ ಬೆಂಗಳೂರಿನಲ್ಲಿ ಮಧ್ಯಾಹ್ನ ದರ್ಶಿನಿ ಹೋಟೆಲ್ಗಳಲ್ಲಿ Rs.70 ಕೊಟ್ಟು ತಿನ್ನುವ ಫಲಹಾರ ನೆನಪಾಗದೆ ಇರದು. ಮಧ್ಯಾಹ್ನ ಜಗಲಿ ಮೇಲೆ ಕುಳಿತು ಊರ ಕಥೆ ಎಲ್ಲಾ ಮಾತಾಡ್ತೀವಿ. "ರಾಯರ ಮನೇಲಿ ಹೀಗಾಯ್ತಂತೆ", "ನಮ್ಮ ಹಿಂದಿನ ಕೇರಿ ರಮೇಶ ಅದ್ಯಾರೋ ಇತರೆ ಜಾತಿ ಹುಡುಗಿನ ಇಷ್ಟ ಪಡ್ತಿದ್ದಾನೆ ಅನ್ಸುತ್ತೆ. ಅವರ ಅಮ್ಮ ಹೇಳ್ತಿದ್ಲು..." ಹೀಗೆ ನಮ್ಮ ಬೆಂಗಳೂರು ಭಾಷೆಯ gossip ಅಥವಾ bitching ಎಲ್ಲಾ ಅಚ್ಚುಕಟ್ಟಾಗಿ ಮನೆಯವರೆಲ್ಲಾ ಸೇರಿ ಮಾಡ್ತೀವಿ. ಏನೋ ಖುಷಿ ಆಗುತ್ತೆ ನಮ್ಮವರೆಲ್ಲರ ಜೊತೆ ಕಾಲ ಕಳೆಯಲು. 

ಊರಲ್ಲಿ ನನ್ನ ಜೊತೆ ಓದಿದೊರೆಲ್ಲಾ ಈಗ ಬೆಂಗಳೂರ್, ಮುಂಬೈ, ಪುಣೆ, ಚೆನ್ನೈ ಹೀಗೆ ಹಲವಾರು ಕಡೆ settle ಆಗಿದ್ದಾರೆ. ನನ್ನ ಜೊತೆ ಓದುತ್ತಾ ಇದ್ದ ಎಷ್ಟೋ ಜನಕ್ಕೆ ಮದುವೆ ಸಹ ಆಗಿದೆ. ನನಗೆ ಇನ್ನು ಎರಡು ವರ್ಷದಲ್ಲಿ ಅಪ್ಪ ಅಮ್ಮನೇ ಒಂದು ಚಂದದ ಹುಡುಗಿ ತಂದು ತೋರಿಸ್ತಾರೆ. ನಮಗೆ ಈ ಬೆಂಗಳೂರಿನ ಹುಡುಗೀರೆಲ್ಲ match ಆಗೋಲ್ಲ. ಎಷ್ಟೇ ಆದರೂ ಅರ್ಚಕರ ಮನೆ. ಮಡಿ-ಮೈಲಿಗೆ, ಆಚಾರ-ವಿಚಾರ, ಸಂಪ್ರದಾಯ ಎಲ್ಲಾ ತಿಳಿದಿರೋ ಚೆಂದದ ಹುಡುಗೀನೆ ಅಪ್ಪ ಅಮ್ಮ ತರ್ತಾರೆ. ನಾನು ಅದಕ್ಕೆ ಆ ಬಗ್ಗೆ ಯೋಚನೆ ಕೂಡ ಮಾಡಿಲ್ಲ.  ನಾನೇನು ಇಲ್ಲಿಯೇ ಇರೋದಿಲ್ಲ. ಆದರೆ "ಬೆಂಗಳೂರು ಸಾಕಾಯ್ತು, ನಡೀ ನಮ್ಮ ಊರಿಗೆ ಹೋಗೋಣ. ನೆಮ್ಮದಿಯ ಬದುಕು ಸಾಗಿಸೋಣ." ಅಂತ ಹೇಳಿದಾಗ ಒಂದು ಮಾತು ಇಲ್ಲ ಅನ್ನದೇ ವಾಪಸ್ ಬರೋಕೆ ಒಪ್ಪಿಕೊಳ್ಳೋಳು ನಮ್ಮ ಈ ಜೀವನ ಅನುಭವಿಸಿರುವ ಹುಡುಗಿ ಮಾತ್ರ.   

ನಾನು ಚಿಕ್ಕಂದಿನಿಂದ ಹೋಗ್ತಿದ್ದ ಪೆಪ್ಪೆರ್ಮೆಂಟ್ ಅಂಗಡಿ ಇನ್ನೂ ಇದೆ. Ferrero Rocher ಕಾಲಘಟ್ಟದಲ್ಲಿ ಅದೇನು ವ್ಯಾಪಾರ ಆಗ್ತಿದ್ಯೋ ಗೊತ್ತಿಲ್ಲಾ. But ಊರಿಗೆ ಹೋದಾಗೆಲ್ಲಾ ಈಗಲೂ ಅಲ್ಲಿ ಹೋಗಿ ಬರ್ತೀನಿ. ನಮ್ಮ ದೇವಸ್ಥಾನದಲ್ಲಿ ಎಷ್ಟೋ ಪವಾಡಗಳು ಆಗಿದೆ. ನನ್ನ ಹೊಸ officeನ ಫ್ರೆಂಡ್ಸ್ ಗೆಲ್ಲಾ ಆ ಕಥೆಗಳನ್ನು ಹೇಳ್ತಾ ಇರ್ತೀನಿ. ಆ ದೇವಸ್ಥಾನದ ಹತ್ರ ಚಪ್ಪಲಿ ಕಾಯೋನು ಇನ್ನು ಅಲ್ಲೇ ಇದ್ದಾನೆ. ಹೋದಾಗೆಲ್ಲಾ ಎರಡು ಘಂಟೆ ಮಾತಾಡಿಸ್ತಾನೆ ಬೆಂಗಳೂರಿನ ಬಗ್ಗೆ ಕೇಳ್ತಾ. ಅವನಿಗೆ ಅವನ ಮಗನನ್ನು ಬೆಂಗಳೂರಿಗೆ ಕಳಿಸೋ ಕನಸು. ನನಗೆ ನನ್ನ ಊರಿಗೆ ಮರಳೋ ಕನಸು. ಒಟ್ಟಿನಲ್ಲಿ ನಮ್ಮ ಬದುಕು ಇನ್ನೊಬ್ಬರ ಕನಸು ಅನ್ನೋ ಮಾತು ತುಂಬಾ ಸತ್ಯ. 3 ದಿನಗಳ ದೀಪಾವಳಿ ಹಬ್ಬ ಸಂಜೆ ಮನೆ ಮುಂದೆ ದೀಪಗಳ ಅಲಂಕಾರ ಮಾಡ್ತೀವಿ. ಮನೆಯ ಜಗಲಿ ಮೇಲೆ ಕೂತು ಕಷ್ಟ ಸುಖ ಮಾತಾಡ್ತೀವಿ. Mobile network ಸಿಗದೇ ಇದ್ದಾಗ ಲೈಫ್ ನಲ್ಲಿ ಎಷ್ಟು time ಸಿಗುತ್ತೆ ಅಲ್ವಾ ಅನ್ನೋ ಸತ್ಯ ಅರ್ಥ ಆಗುತ್ತೆ. Quality time ಅಂದರೆ ಏನು ಅನ್ನೋದು ಸಹ ಅರ್ಥ ಆಗುತ್ತೆ. 3 ದಿನ ಅಮ್ಮ ಮಾತ್ರ ಬಿಡುವಿಲ್ಲದೆ ಅಡಿಗೆ ಮನೆಯಲ್ಲಿ ನಂಗೆ ಇಷ್ಟ ಇರೋ ಎಲ್ಲಾ ಪದಾರ್ಥ ಮಾಡಿ ಬಡಿಸ್ತಿರ್ತಾರೆ. Parcel ಸೇವೆ ಸಹ ನಡಿಯುತ್ತೆ ಹೊರಡುವಾಗ.  

ಹೊರಡೋ ದಿನ ಮಾತ್ರ ಎಷ್ಟು ಬೇಸರ ಮೂಡಿಸುತ್ತೆ ಅಂದ್ರೆ ಮನಸ್ಸಿಲ್ಲದ ಮನಸ್ಸಿನ್ನಿಂದ ವಾಪಸ್ ಬ್ಯಾಗ್ pack ಮಾಡಿ, ಮತ್ತೊಮ್ಮೆ ನೆಂಟರ ಮನೆಗೆಲ್ಲಾ ಹೋಗಿ "ಹೊರಡ್ತೀನಿ" ಅಂತ ಹೇಳಿ ಹೊರಟಾಗ ಮತ್ತದೇ ಒಂಟಿತನ, ಮತ್ತದೇ ಅಸ್ತಿತ್ವದ ಪ್ರಶ್ನೆ ಹಾಗೂ ಮತ್ತದೇ ಕಾಡೋ ನೆನಪುಗಳು. ಹೊರಡುವಾಗ ನೆನಪಿನ ಭಾರ ಇನ್ನೂ ಹೆಚ್ಚಿರುತ್ತೆ, ಈ ಬಾರಿಯ ಹೊಚ್ಚ ಹೊಸ ಮಧುರ ನೆನಪುಗಳೊಂದಿಗೆ. Goodbyes are so difficult ಅಂತ ಅನ್ನಿಸದೆ ಇರದು. ಅಮ್ಮನ ಬೇಸರ ಹೊರ ಹಾಕೋ ಅವಳ ಕಣ್ಣೀರಿಗೆ, "ಮತ್ತೆ ಬರ್ತೀನಿ ಅಮ್ಮ. ಸಂಕ್ರಾಂತಿ ಇನ್ನೇನು ಬಂದೆ ಬಿಡ್ತು. ನೀನ್ ಆರೋಗ್ಯ ಸರಿಯಾಗಿ ನೋಡ್ಕೋ." ಅಂತ ಹೇಳಿದರೂ ಸಹ ಸಂಕ್ರಾಂತಿಗೆ ಇನ್ನು 3 ತಿಂಗಳಿದೆ ಅನ್ನೋ ಸತ್ಯ ಸುಳ್ಳಾಗೋಲ್ಲಾ. ಬಸ್ ಸ್ಟ್ಯಾಂಡ್ಗೆ motor bike ನಲ್ಲಿ ಬಿಡೋಕೆ ಬರೋ ಅಪ್ಪ "ಆಚೆ ಜಾಸ್ತಿ ತಿನ್ಬೇಡ. ಮನೆಲೀ ಏನಾದ್ರು ಮಾಡ್ಕೋ. ಖರ್ಚಿಗೆ ಈ ಎರಡು ಸಾವಿರ ರೂಪಾಯಿ ಇಟ್ಕೋ, ಬೇಕಾಗ್ತದೆ." ಅಂತ ದುಡ್ಡು ಕೊಡುವಾಗ ಚಿಕ್ಕ ವಯಸ್ನಲ್ಲಿ ಅಪ್ಪ ಮಿಠಾಯಿಗೆ ಅಂತ ಕೊಡ್ತಿದ್ದ 2 ರೂಪಾಯಿ ನಾಣ್ಯ ನೆನಪಾಯ್ತು. 

ಹೊರಡುವ ಸಮಯಕ್ಕೆ ಮಾತ್ರ ಸರಿಯಾಗಿ ಬರೋ ನಮ್ಮೂರಿನ ಬಸ್ ಅವತ್ತು ಸಹ ಸಮಯಕ್ಕಿಂತ ಮುಂಚೆಯೇ ಬಂದು ಕಾಯ್ತಿತ್ತು. ಹೊರಡುವ ಸಮಯ ಆಗಿತ್ತು. ದೀಪಾವಳಿ ಸಹ ಮುಗಿದಿತ್ತು. ಹೊರಗೆ ಕತ್ತಲಾಗ್ತಿತ್ತು. ಆ 4 ದಿನಗಳ ನೆನಪುಗಳ ಚೈತನ್ಯ ಸಾಕು ಮತ್ತೆ ಊರಿಗೆ ಬರುವ ತನಕ. ಅದೇ ಸಮಯದಲ್ಲಿ ಬಸ್ನಲ್ಲಿ play ಮಾಡ್ತಿದ್ದ ಈ ಹಾಡು ನನಗಾಗಿಯೇ ಹಾಕಿದ್ದಾರೆ ಅನ್ನಿಸೋ ಹಾಗೆ ಇತ್ತು:

"ಮತ್ತದೇ ಬೇಸರ... ಅದೇ ಸಂಜೆ...ಅದೇ ಏಕಾಂತ..."

ಇಡೀ ದಾರಿಯಲ್ಲಿ ಆ 4 ದಿನಗಳ ನೆನಪುಗಳ recall ಮಾಡ್ತಾ ಮಾಡ್ತಾ ನಿದ್ದೆಗೆ ಜಾರಿ ಕಣ್ಣು ಬಿಟ್ಟಾಗ ಯಶವಂತಪುರ ಬಂದೇ ಬಿಟ್ಟಿತ್ತು. ಅದೇ ಶಬ್ಧ, ಅದೇ trafficನ ಜಂಜಾಟ & ಅದೇ ವೇಗ. But ನನ್ನಂತಹ ಸಣ್ಣ ಊರುಗಳಿಂದ ಬಂದು ಕನಸುಗಳ ಹಿಂದೆ ಓಡುತ್ತಾ ಇರುವ ಲಕ್ಷಾಂತರ ಮಂದಿಗೆ ಆಸರೆ ನೀಡಿರುವ ಆಲದ ಮರದಂತೆ ಬೆಂಗಳೂರು ಭಾಸವಾಯ್ತು. ಇದೂ ಸಹ ನನ್ನೂರೇ ಇರಬೇಕು, ನನ್ನ ಬೇರು ಅಲ್ಲಿದೇ ಅಷ್ಟೇ. ಬೇರನ್ನು ಬಿಟ್ಟು ಬದುಕುವುದು ಅಸಾಧ್ಯವೇ ಅಸಾಧ್ಯ, ಆದರೆ ಆ ಬೇರು, ನೀನು ನನ್ನಲ್ಲಿಯೇ ಬೆಳೆಯಬೇಕು ಅನ್ನುವಷ್ಟು ಸ್ವಾರ್ಥಿಯೂ ಇರಲಿಕ್ಕಿಲ್ಲ. ಬೇರು ಗಟ್ಟಿ ಇರಬೇಕಷ್ಠೆ, ಅದರ ರೆಂಬೆ ಕೊಂಬೆ ತನ್ನಿಷ್ಟಕ್ಕೆ ತಾನು ಬೆಳೆಯಬಹುದು, ನನ್ನಂತೆ. 

ಇದು ನಿಮ್ಮದೇ ಕಥೆ ಇರಬೇಕಲ್ವಾ.....!

ಭಾವನೆ : ಅನಿವಾಸಿ ಬೆಂಗಳೂರಿನವರದ್ದು 

ನಿರೂಪಣೆ  : ನವೀನ್ ಎಸ್ ಎನ್