Friday 24 March 2017

ಅವಳೆಂದರೆ...!!! ಸಂಚಿಕೆ ೩


ರಂಭೆ, ಊರ್ವಶಿ, ಮೇನಕೆ ಅಂತೆಲ್ಲ ತಿಲೋತ್ತಮ ಸುಂದರಿಯರನ್ನ ನನ್ಮುಂದೆನೇ ಅದೆಷ್ಟೋ ಜನ ಮಾತಾಡಿದ್ದನ್ನ ಕೇಳಿಸಿಕೊಂಡಿದ್ದೀನಿ. ಆದರೆ ನಾನು ಇವಳನ್ನ ನೋಡಿದೀನಿ. ಹಸಿರು ಜರಿಯಂಚಿನ ಆ ಕೆಂಪು ಸೀರೆಯನ್ನುಟ್ಟ ದಿನದಿಂದ ನಾ ಅವಳನ್ನ ನೋಡ್ತಾ ಇದೀನಿ. ಲೋಕಕ್ಕೆಲ್ಲಾ ಹುಣ್ಣಿಮೆ ಚಂದ್ರನ ದರ್ಶನ ತಿಂಗಳಿಗೊಮ್ಮೆಯಾದ್ರೆ, ಚಂದಿರನ ಮೊಗವುಳ್ಳ ಈ ಸುಂದರಿಯ ನಿತ್ಯದರ್ಶನ ಭಾಗ್ಯ ನನ್ನದು. ದಿನಾ ಅದೆಷ್ಟೇ ಜನರನ್ನ ನೋಡಿದರೂ ಇವಳಲ್ಲಿ ಎಲ್ಲರಿಗಿಂತ ಭಿನ್ನವಾದ ಅದೇನೋ ವಿಶೇಷತೆ ಇದೆ ಅನ್ನಿಸುತ್ತೆ. ಮೀನಿನಂತ ಅವಳ ಕಂಗಳಿಗೆ ಕಾಡಿಗೆಯ ತೀಡಿ, ಸೀರೆಗೊಪ್ಪುವ ಸಿಂಧೂರವ ಧರಿಸಿ ತುಟಿಯರಳಿಸಿ ನಕ್ಕಾಗ ಚುಕ್ಕಿ ತಾರೆಗಳೇ ನಾಚಿಯಾವು, ಇನ್ನು ನಾನು ಮರುಳಾಗುವುದು ಹೆಚ್ಚೇ...!?
ಹೀಗಂತ ಕನ್ನಡಿಯ ಹುಚ್ಚು ಕಲಾಪ ಒಂದೆಡೆ...      
--------

ಅವತ್ತಿಗೆ ಅಮ್ಮ ಸತ್ತು ೧೨ ದಿನ ಆಗಿತ್ತಷ್ಟೆ. ಅಪ್ಪನ್ನ ನೋಡಿದ ನೆನಪಂತೂ ಮೊದಲೇ ಇಲ್ಲ. ಅದ್ಯಾಕೋ ಆ ಮರದ ಪೆಟ್ಟಿಗೆಯಲ್ಲಿ ಜತನವಾಗಿಟ್ಟಿದ್ದ ಅಮ್ಮನ ಹಸಿರು ಜರಿಯಂಚಿನ ಆ ಕೆಂಪು ಸೀರೆ ಉಡಬೇಕೆನಿಸಿತ್ತು. ಅವತ್ತೇ ನಮ್ಮಮ್ಮನ ಸೋದರ ಸಂಬಂಧಿಯೊಬ್ಬ ಮನೆಗೆ ಬಂದಿದ್ದ. ನನ್ನ ಕಥೆ ನೋಡಿ ಕಣ್ಣೀರಾಗಿದ್ದ, ಅಥವಾ ಹಾಗೆ ನಟಿಸಿದ್ದು ಇರಬೇಕು. ಅಮ್ಮ ದುಡಿದು ತಂದಿಟ್ಟಿದ್ದ ಸಾಮಾನೆಲ್ಲ ನಿನ್ನೆಗೇ ಮುಗಿದುಹೋಗಿತ್ತು. ಇವತ್ತಿಂದ ಊಟಕ್ಕೆ ಏನ್ ಮಾಡಬೇಕು ಅನ್ನೋ ಕಲ್ಪನೆ ಕೂಡ ನನಗಿರಲಿಲ್ಲ. "ರಾಜಾಜಿನಗರದ ನಮ್ಮನೆಗೆ ಬಾ, ನಮ್ಮ ಫ್ಯಾಮಿಲಿ ಜೊತೇನೆ ಇರು" ಎಂದವನ ಮರು ಪ್ರಶ್ನಿಸದೆ ಲಗೇಜ್ ಪ್ಯಾಕ್ ಮಾಡಿ, ಮರುಭೂಮಿಯಲ್ಲಿ ಸಿಕ್ಕ ಓಯಾಸಿಸ್ ಹುಡುಕಿ ಹೊರಟಂತೆ ಅವನೊಂದಿಗೆ ಹೊರಟು ಬಿಟ್ಟಿದ್ದೆ. ಮತ್ತೆಂದೂ ನಾನು ನಾನಾಗಿ ಹೊರಬರಲಾರದೆ ಕೂಪವೊಂದಕ್ಕೆ ನನ್ನ ತಳ್ಳುತ್ತಾನೆ ಅನ್ನೋ ಕಲ್ಪನೇನಾದರೂ ಹೆಂಗಿರಬೇಕು ನನಗೆ. ಅದನ್ನೆಲ್ಲಾ ಯೋಚನೆ ಮಾಡೋ ವಯಸ್ಸು ಕೂಡ ನಂದಾಗಿರಲಿಲ್ಲ. ಅಮ್ಮನ ಸೀರೆ ಉಟ್ಟಿದ್ದ ಖುಷಿ ಒಂದೆಡೆಯಾದರೆ, ಎಲ್ಲೋ ಬೇರೆ ಕಡೆ ಹೋಗ್ತಿದೀನಿ ಅನ್ನೋ ಕುತೂಹಲ ಬೇರೆ. ಪೇಟೆಗೆ ಕರೆದುಕೊಂಡು ಹೋಗಿ ಮಕ್ಕಳಿಗಿಷ್ಟವಾಗಿದ್ದನ್ನ ಕೊಡಿಸಿ ಖುಷಿ ಪಡಿಸಿ ಮತ್ತೆ ಮನೆಗೆ ಕರೆದುಕೊಂಡು ಬರ್ತಾ ಇದ್ದ ಅಪ್ಪ-ಅಮ್ಮರನ್ನ ನೋಡಿ ಬೆಳೆದ ನನಗೆ ನನ್ನ ಕನಸು ನನಸಾದಂತಿತ್ತು. ಹೊಟ್ಟೆ ಕಿತ್ತು ಬರುವಷ್ಟು ಹಸಿವಾಗ್ತಾ ಇತ್ತು. ಅದಾವುದೋ ಇಕ್ಕಟ್ಟಾದ ಹೊಟೇಲಿನಂತಿದ್ದ ಸ್ಥಳಕ್ಕೆ ನನ್ನ ಕರೆದುಕೊಂಡು ಹೋದರು. ನಿಂಗೆ ಏನ್ ಬೇಕೋ ಅದನ್ನ ತಗೋ ಅಂದರು. ನಿಮಿಷಾರ್ಧದಲ್ಲಿ ಹೊಟ್ಟೆ ಸಂತೃಪ್ತಿಯ ಗಂಟೆ ಹೊಡೆದಿತ್ತು. ನಿಂಗೆ ಇದೇ ಹೋಟೆಲಿನ ರೂಮೊಂದರಲ್ಲಿ ಇರೋಕೆ ವ್ಯವಸ್ಥೆ ಮಾಡ್ತೀನಿ, ನೀ ಇಲ್ಲಿ ಆರಾಮವಾಗಿರಬಹುದೆಂದರು. ಆಸರೆ ಬಯಸಿದ್ದ ನನಗೆ ಯಾವುದಾದರೇನು ಅನ್ನಿಸ್ತು. ಅದಕ್ಕೇ ಹೂ ಅಂದೆ. ಅಷ್ಟೇ... ಮುಂದಿನದ್ದನ್ನ ನೆನಪಿಸಿಕೊಳ್ಳೋದಕ್ಕೂ ಇಷ್ಟ ಇಲ್ಲ ನಂಗೆ. ಹೀಗೆ ಸಾವಿರ ಕತೆಗಳನ್ನ ಹೇಳೋ ಡೈರಿಯ ಪುಟಗಳು ಇನ್ನೊಂದೆಡೆ.
-------

ನನ್ನಂತೆಯೇ ಬೇಕಾಗಿಯೋ, ಬೇಡದೇನೋ ಈ ಕೆಟ್ಟ ಕೂಪವೊಂದಕ್ಕೆ  ಬಂದು ಬೀಳೋ ಅದೆಷ್ಟೋ ಹೆಣ್ಮಕ್ಕಳಿಗೂ ಒಂದು ಮನಸ್ಸಿದೆ ಅಂತ ಅರ್ಥ ಆಗೋದೇ ಇಲ್ಲ. ಈ ಜಗತ್ತು ಕೂಡ ಒಂದು ಕನ್ನಡಿಯಿದ್ದಂತೆ. ದುಃಖದಲ್ಲಿದ್ದಾಗ, ನೋವಲ್ಲಿದ್ದಾಗ ನಾವ್ಯಾರಾದರೂ ಕನ್ನಡಿಯನ್ನ ನೋಡ್ತೀವಾ? ಇಲ್ಲವಲ್ಲ ? ಕನ್ನಡಿಗೆ ಹೇಗೆ ನಮ್ಮ ಇನ್ನೊಂದು ಮುಖದ ಅಥವಾ ನೋವುಗಳನ್ನ ತುಂಬಿಕೊಂಡಿರೋ ಮನಸ್ಸಿನ ಪರಿಚಯ ಇರುವುದಿಲ್ಲವೋ ಹಾಗೆ ಜಗತ್ತೂ ಕೂಡ.

ದಿನೇ ದಿನೇ ಬದಲಾಗೋ ಅತೀ ಹೆಚ್ಚು ಅಂತಾನೆ ಅನ್ನಿಸೋ ನನ್ನ ಬಣ್ಣ-ಬ್ಯಾಗಡೆ, ಬಿಂಕ ಬಿನ್ನಾಣಗಳನ್ನ ನೋಡಿ ನಮ್ಮ ಬೀದಿಯ ಕಿರಾಣಿ ಅಂಗಡಿಯವನಿಂದ ಹಿಡಿದು, ಶಾಲೆಯಿಂದ ಬರೋ ತಮ್ಮ ಮಕ್ಕಳನ್ನ ಕರೆದುಕೊಂಡು ಹೋಗೋಕೆ ಶಾಲಾ ವಾಹನಕ್ಕೆ ಕಾದು ನಿಂತಿರೋ ಅಮ್ಮಂದಿರು ನನ್ನ ನೋಡಿ ಅನುಮಾನದಿಂದ ಏನೋ ಗುಸುಗುಸುಮಾತಾಡುವಾಗ, ಪಡ್ಡೆ ಹುಡುಗರು ನನ್ನ ಕೆಕ್ಕರಿಸಿ ನೋಡುವಾಗ ನಂಗೆ ಗೊತ್ತಾಗೋಲ್ಲ ಅಂತನಾ? ಏನ್ಮಾಡ್ಲಿ ಸುಮ್ಮನಿರಬೇಕಾದ ಅನಿವಾರ್ಯತೆ ನಂದು. ಹಗಲೆಲ್ಲ ಒಮ್ಮೊಮ್ಮೆ ಊಟ ತಿಂಡಿನೂ ಮರೆತು ನಿದ್ದೆ ಮಾಡಬೇಕು. ನಮಗೆಲ್ಲ ಬೆಳಗಾಗೋದೇ ಸೂರ್ಯ ಮುಳುಗಿದ ಮೇಲಲ್ಲವೇ? ಹೆಣ್ಮಕ್ಕಳು ಒಬ್ಬೊಬ್ಬರೇ ಓಡಾಡುವ ಸಂದರ್ಭದಲ್ಲಿ  "ದೇವರೇ ಯಾವುದೇ ಗಂಡು ಪ್ರಾಣಿಯ ಕೆಟ್ಟ ದೃಷ್ಟಿಯ ನೆರಳೂ ಸಹ ತಾಕದಿರಲಿ" ಅಂತ ಅಂದುಕೊಳ್ಳುತ್ತಾರೆ. ಆದರೆ ನನ್ನಂತವರಿಗೆ ಅಧೋ ರಾತ್ರಿಯಲ್ಲಿ ಆ ಮೆಜೆಸ್ಟಿಕ್ ನ್ ಓಣಿಯಲ್ಲಿ ಯಾರಾದರೂ ನಮ್ಮನ್ನ ನೋಡಿ ಕರೆಯಲಿ ಅಂತ ಕಾಯಬೇಕಾದ ಅಸಹ್ಯ ಪರಿಸ್ಥಿತಿ. ಒಮ್ಮೊಮ್ಮೆ ಮನಸ್ಸು ನಲುಗಿ ಹೋಗತ್ತೆ. ಅದೆಷ್ಟು ಜನ ಸಿಕ್ತಾರೆ, ಅದೆಷ್ಟು ಜನ ಬರ್ತಾರೆ, ಆದರೆ "ಈ ಕೆಟ್ಟ ಸ್ಥಿತಿಯನ್ನ ಏಳೇಳು ಜನ್ಮಕ್ಕೂ ಕೊಡಬೇಡ" ಅಂತ ಬಿಕ್ಕಿ ಬಿಕ್ಕಿ ಅಳುವಾಗಲು ಕೂಡ ನಮಗೇ ಅಂತ ಸಮಾಧಾನ ಮಾಡೋಕೆ ನಮ್ಮ ಪಾಲಿಗೆ ಯಾರು ಉಳಿದಿರುವುದಿಲ್ಲ. ಆಗೆಲ್ಲ ಒಂಟಿತನ ತುಂಬಾನೇ ಕಾಡಿಬಿಡತ್ತೆ.
ಒಟ್ಟಾರೆ ಪ್ರಪಂಚದ ಕಣ್ಣಿಗೆ ನಾವು ಬೇಕಾದಾಗ ಉಪಯೋಗಿಸಿಕೊಂಡು, ಬೇಡವೆಂದಾಗ ಅಸಹ್ಯಪಡುವಂತ ಪ್ರತ್ಯೇಕ ಗುಂಪನ್ನಾಗಿಸೋ ಒಂತರ ಆಟದ ಬೊಂಬೆಯಂತೆ. ಕೀಲಿಕೊಟ್ಟವನು ಕೂಡ ಆ ಭಗವಂತನೇ ಅಲ್ಲ್ವಾ? ಯಾರನ್ನ ದೂರೋಕಾಗತ್ತೆ.? ವರ್ಷಕೊಮ್ಮೆ ನಮ್ಮ ಬೀದಿಯಲ್ಲಿ ನಡೆಯೋ ಗಣೇಶನ ಉತ್ಸವಕ್ಕೆ ಹೋಗೋದಕ್ಕೂ ಭಯ.ಮೈಲಿಗೆ ಆಗಿ ಬಿಟ್ಟರೆ ಅಂತ. ಹೆಣ್ತನ, ತಾಯ್ತನ ಯಾವುದರ ಖುಷಿಯಲ್ಲೂ ನನಗೆ ಪಾಲಿಲ್ಲ.

ನೀವೇ ಹೇಳಿ, ಯಾವ ಹೆಣ್ಣಿಗೆ ತಾನೇ ತಾನು ತಾಯಿ  ಆಗ್ತಾ ಇದೀನಿ ಅಂದಾಗ ಖುಷಿಯಾಗಲ್ಲ, ಅಬ್ಬಾ ನನ್ನ ಜನ್ಮ ಸಾರ್ಥಕ ಆಯಿತು ಅನ್ನಿಸೊಲ್ಲ? ಆದರೆ ಆ ಖುಷಿಯ ಭಾಗ್ಯ ನಂಗಿಲ್ಲವೇ. ಸಂಭ್ರಮಿಸಬೇಕಾಗಿದ್ದ ನನ್ನಪ್ಪ, ನನ್ನಮ್ಮ, ಅಕ್ಕನೋ, ಅಣ್ಣನೋ, ಕೊನೆಗೆ ಗಂಡ.. ಉಹುಂ ಯಾರಿಲ್ಲ ನನ್ನ ಪಾಲಿಗೆ. ಕೊನೆಪಕ್ಷ ಈ ಕರುಳ ಕುಡಿಗೆ ಅಪ್ಪ ಯಾರು ಅಂತ ಹೇಳೋ ಅದೃಷ್ಟನೂ ಇಲ್ಲ. ಹೋಗಲಿ ನಂಗಾದರು ಗೊತ್ತಾ ಯಾರು ಅಂತ? ಎಂತ ದರಿದ್ರ ಬದುಕಲ್ಲ್ವಾ ನಂದು. ಮೈಮಾರಿಕೊಂಡು ಜೀವನ ನಡೆಸೋ ಈ ಜೀವವನ್ನೆ ಒಂದೇ ಸಲ ಕೊಂದುಬಿಡೋಣ ಅಂದರೆ ಸಾವಿನ ಭಯ ಬಿಡುತ್ತಿಲ್ಲ, ಬದುಕಿನೆಡೆಗಿನ ಪ್ರೀತಿ ನಿಲ್ಲುತ್ತಿಲ್ಲ. ಆಗ ಹಸಿವು, ಬದುಕಲು ದುಡ್ಡು ಇದೆಲ್ಲ ಕಾರಣ ಇತ್ತು. ಆದರೆ ಇವತ್ತು ಅದ್ಯಾವುದೂ ಇಲ್ಲ. ಆದರೂ ಇದರಿಂದ ಹೊರಬಂದು ಜೀವಿಸೋಕಾಗ್ತಿಲ್ಲ. "ಸಾಕು ಇದೆಲ್ಲ ಬಿಟ್ಟು ಬಿಡೋಣ" ಅಂತ ನಿರ್ಧರಿಸಿ ಹೊರಟವಳನ್ನ ತಡೆದ ಈ ಲೋಕ ಅದೆಷ್ಟು ಕಂದಮ್ಮಗಳನ್ನ ಹುಟ್ಟೋ ಮುಂಚೆನೇ ಹೊಸಕಿ ಹಾಕೋಕೆ ದಾರಿ ಮಾಡಿಕೊಟ್ಟಿದೆಯೋ...

ಒಮ್ಮೊಮ್ಮೆ ಯಾವುದು ಸರಿ ಯಾವುದು ತಪ್ಪು, ನಾನು ನಡೆಯುತ್ತಿರುವ ದಾರಿ ಧರ್ಮದ್ದ ಅಥವಾ ಅಧರ್ಮದ್ದ ? ಯಾವುದನ್ನೂ ನಿರ್ಧರಿಸಲಾಗದ ಪರಿಸ್ಥಿತಿಯಲ್ಲಿ ಸಿಲುಕಿ ಒದ್ದಾಡುವಂತಾಗಿಬಿಡುತ್ತದೆ. ಸರಿ-ತಪ್ಪು ಸಾವು-ಬದುಕು ಇವೆಲ್ಲದರ ಜುಗಲ್ ಬಂದಿ ನಡುವೆ ಮನಸ್ಸು ನಲುಗಿದಾಗ ನಾನು ಈ ಮನೆಯಲ್ಲಿ ಇರೋದೇ ಇಲ್ಲ. ಆಗೆಲ್ಲಾ ನಾ ಹೋಗೋದು ಒಂದೇ ಸ್ಥಳಕ್ಕೆ. ನನ್ನಂತೆ ಬೀದಿಪಾಲಾಗಿದ್ದ ಮಕ್ಕಳಿಗೆ ಆಶ್ರಯ ನೀಡಬೇಕು ಅಂತ ನಾನೇ ಶುರುಮಾಡಿದ "ಆಸರೆ" ಅನಾಥಾಶ್ರಮದ ಮಡಿಲಿಗೆ. ಮನಸ್ಸಿಗೆ ಸಮಾಧಾನ ಸಿಗುವಷ್ಟು ಹೊತ್ತು ಅಲ್ಲಿದ್ದು ಬರುತ್ತೇನೆ. ನನ್ನೆಲ್ಲ ದುಃಖವನ್ನ ಮುಚ್ಚಿಡಲು ಮೇಕಪ್ ನ ಮೊರೆ ಹೋಗಿ ನಗುಮುಖದ ಮುಖವಾಡ ಧರಿಸಿ ಕನ್ನಡಿಯನ್ನೊಮ್ಮೆ ನೋಡಿದೆ. ಕನ್ನಡಿಯು ನನ್ನ ನೋಡಿ ನಕ್ಕಂತಾಯಿತು.

ಅವಳೆಂದರೆ... ಅದೆಷ್ಟೋ ಹೇಳಿಕೊಳ್ಳಲಾಗದ ರಹಸ್ಯಗಳನ್ನ ತನ್ನೊಡಲಲ್ಲಿ ಇಟ್ಟುಕೊಂಡು ಜೀವಿಸೋ ಗುಪ್ತಗಾಮಿನಿ.
ಅವಳೆಂದರೆ... ಬೀಸುವ ಬಿರುಗಾಳಿಗೆ ತರಗೆಲೆಯಂತಾಗದೆ ಜೀವನದ ಕಷ್ಟಗಳನ್ನ ಎದಿರಿಸೋದಕ್ಕೆ ಟೊಂಕ ಕಟ್ಟಿ ನಿಲ್ಲುವ ಅಪರಾಜಿತೆ...
ಅವಳೆಂದರೆ ತನ್ನತನವನ್ನೆಲ್ಲ ಬರಿದುಗೊಳಿಸೋ ಈ ಮಾನವ ಪ್ರಪಂಚದಲ್ಲಿ ಮತ್ತೆ ನೆನಪಾಗಿ ಉಳಿಯೋ ನಿತ್ಯ ಸಂಜೀವಿನಿ...
  
                     
 
               

Wednesday 15 March 2017

ಅವಳೆಂದರೆ...!!! ಸಂಚಿಕೆ ೨


ಸಂಚಿಕೆ ೨

ಒಂದು ವಾರದ ರಜೆಗೆಂದು ಊರಿಗೆ ಬಂದವಳು ಇವತ್ತು ಅದೇ ಉದ್ಯಾನ ನಗರಿಗೆ ಪ್ರಯಾಣ ಬೆಳೆಸೋ ತರಾತುರಿಯಲ್ಲಿದ್ದೆ. ನನ್ನದೇ ಬೋಗಿಯನ್ನು ಹತ್ತಿದ ನಮ್ಮೂರಿನ ಕೊನೆಮನೆ  ಅಕ್ಕನನ್ನ ನೋಡಿ ಅದೇನೋ ಎಲ್ಲಿಲ್ಲದ ಖುಷಿ ಆಯಿತು. ಬಹುಶ ಬೆಂಗಳೂರಿಗೆ ಹೋಗೋ ತನಕ ಒಳ್ಳೆ company ಸಿಕ್ಕಿತು ಅನ್ನೋ ಸ್ವಾರ್ಥವಿದ್ದರೂ ಇರಬಹುದು. ನಮ್ಮಿಬ್ಬರ ಮಧ್ಯೆ ಉಭಯ ಕುಶಲೋಪರಿಯ ವಿನಿಮಯ ಮುಗಿದು ನಮ್ಮಿಬ್ಬರ ಜೀವನದ ಆಗು-ಹೋಗುಗಳ ಬಗ್ಗೆ ಆಗಲೇ ಮಾತು ಶುರುವಾಗಿತ್ತು. ಆಗಲೇ ಆಕೆ ತನ್ನ ಬದುಕಿನ ಬವಣೆಗಳನ್ನ ಅವಳು ಹೇಳೋಕೆ ಶುರುಮಾಡಿದ್ದು.
--------

ನನಗನ್ನಿಸೋ ಪ್ರಕಾರ ನಾನು ಇತ್ತೀಚೆಗೆ ಯಾವುದಕ್ಕೂ ಕಣ್ಣೀರು ಹಾಕುತ್ತಿಲ್ಲ. ಎಷ್ಟೊಂದು sensitive ಆಗಿದ್ದೋಳು ಅಲ್ವಾ ನಾನು? ಏನಾಗಿದೆ ನನಗೆ? ಕಣ್ಣೀರು ಬತ್ತಿ ಹೋಗಿದ್ಯಾ? ಅಥವಾ ಅಳುವುದಕ್ಕೆ ಕಾರಣ ಇಲ್ವಾ? ಇಲ್ಲ..ಇಲ್ಲಾ ಅದು ಹಾಗಲ್ಲ. ನಾನು ಜೀವನ ಎದುರಿಸುವುದನ್ನ ಕಲಿತಿದ್ದೀನಿ. ಹಾಗಂತ ತುಂಬಾನೆ ಖುಷಿ ಆಗಿದ್ದೀನಿ ಅಂತಲ್ಲ. ಬದುಕನ್ನ ಸ್ವತಂತ್ರವಾಗಿ ಎದಿರಿಸುವುದನ್ನ ರೂಢಿಸಿಕೊಂಡಿದ್ದೀನಿ. ಪರಾಧೀನತೆಯಲ್ಲಿನ ಆ ಕಸಿವಿಸಿಯಿಂದ ಮುಕ್ತಳಾಗಿದ್ದೀನಿ. ಇದಕ್ಕೆ ನನ್ನನ್ನು ನಾನೇ ಪ್ರಶಂಸಿಸಿಕೊಳ್ಳಬೇಕೋ ಅಥವಾ ನಾನ್ಯಾಕೆ ಈ ಥರ  drastic change ಆದೆ ಅಂತ ಬೇಜಾರ್ ಮಾಡ್ಕೊಳೋದಾ ಒಂದೂ ಗೊತ್ತಾಗ್ತಿಲ್ಲ . ಬಹುಶ 3 ವರ್ಷ ಆಗಿತ್ತು ಅನ್ಸತ್ತೆ ನಾನು ಮನಸಾರೆ ನಕ್ಕು. ಸ್ವಚ್ಚಂದವಾಗಿದ್ದವಳನ್ನ ಬಂದಿ ಮಾಡಿದ್ದು ಅವನು ಕಟ್ಟಿದ ತಾಳಿ.  ಏಳು ಜನ್ಮ ಜೊತೆ ಇರ್ತೀನಿ ಅಂತ ಪ್ರಮಾಣ ಮಾಡಿ ಏಳು ತಿಂಗಳು ಸಹ ಅವನು ಅವನಾಗಿ ನನ್ನೊಡನೆ ಇರಲಿಲ್ಲ. ಪ್ರತೀ ಹೆಣ್ಣಿಗೂ ಒಂದು ಗಂಡು ಅಂತ ಸ್ವರ್ಗದಲ್ಲೇ ನಿರ್ಧಾರ ಮಾಡಿರ್ತಾನಂತೆ ಆ ದೇವರು. ಹಾಗಾದರೆ ನಾನಿಲ್ಲಿ ಇವನೊಂದಿಗೆ ಆಗಿದ್ದು ನಕಲಿ ಮದುವೆಯ? ನಮ್ಮ ಪ್ರೀತಿ ಸುಳ್ಳಾ ಹಾಗಾದರೆ?

ಎಷ್ಟೇ ಬೇಡ ಅಂತ ಅಂದುಕೊಂಡರೂ ಮನಸ್ಸು ಮತ್ತೆ ಮತ್ತೆ ಅವನ ನೆನಪಿನೆಡೆಗೇ ವಾಲುತ್ತದೆ. ಮನೆಯವರೆಲ್ಲಾ ಬೇಡ ಅಂದರೂ ಹಠ ಹಿಡಿದು ಕೆಲಸಕ್ಕೆ ಸೇರುತ್ತೀನಿ ಅಂತ ಬೆಂಗಳೂರಿಗೆ ಬಂದೆ. ಪುಟಾಣಿ ಹಕ್ಕಿ ಮರಿಯೊಂದು ರೆಕ್ಕೆ ಬಲಿತು ಆಕಾಶದಲ್ಲಿ ಮೊದಲ ಬಾರಿಗೆ ಹಾರಿದಂತಹ ಅನುಭವ. ಒಂದೇ ಮನೆಯವರಂತೆ ಕಾಣೋ PG ಸ್ನೇಹಿತರು, ನಾನು ಮಾಡೋದು ಚಿಕ್ಕ ಕೆಲಸವಾದರೂ ಅದೇನೋ ವಿಶೇಷ ಅನುಭವ ನೀಡುತ್ತಿದ್ದ MNC Company, weekend ಮಸ್ತಿ... ಹೀಗೆ ಖುಷಿಯ ಮಹಾಪೂರಕ್ಕೆ ಪಾರವೇ ಇರಲಿಲ್ಲ. ಹೀಗಿರುವಾಗಲೇ ನಮ್ಮ PGಯ ಪಕ್ಕದ ಮನೆಯ ಇವನು ಪರಿಚಯವಾಗಿದ್ದು. ನಾನು ಅಂತಲ್ಲ ಇಡೀ PGಯವರಿಗೆಲ್ಲ ಅವರ ಮನೆಯವರು ಚಿರಪರಿಚಿತ. ಆದರೆ ಅವನಿಗೆ ನನ್ನ ಮೇಲೆ ಅದೇನೋ ಬೇರೆ ರೀತಿಯ ಆಕರ್ಷಣೆ ಇದೆ ಅಂತ ಅವನ ಕಣ್ಣಿನ ಭಾಷೆಗಳು ಹೇಳುತಿದ್ದವು. ಹಾ.. ಅದನ್ನು ನನ್ನ ಹೃದಯ ಕೂಡ ಬಹಳ ಬೇಗ ಅರ್ಥಮಾಡಿಕೊಂಡುಬಿಟ್ಟಿತ್ತು. ಪರಿಚಯ ಸ್ನೇಹಕ್ಕೆ, ಸ್ನೇಹ ಪ್ರೀತಿಗೆ ತಿರುಗುವುದಕ್ಕೆ ಹೆಚ್ಚೇನೂ ಸಮಯ ತೆಗೆದುಕೊಳ್ಳಲಿಲ್ಲ. ಎಲ್ಲಾ ಪ್ರೇಮಪಕ್ಷಿಗಳಂತೆ ಪಾರ್ಕ್, ಸಿನೆಮಾ, ಮಾಲ್ ಎಲ್ಲಾ ಕಡೆ ಒಟ್ಟಿಗೆ ಓಡಾಡೋದಕ್ಕೆ ಶುರು ಮಾಡಿದ್ವಿ. ಕೊನೆಗೆ ಮನೆಯವರ ಭಿನ್ನಾಭಿಪ್ರಾಯದ ನಡುವೆಯೂ ನಮ್ಮ ಮದುವೆ ನಡೆದೇ ಹೋಯಿತು.

ಎಲ್ಲಾ ಚೆನ್ನಾಗೆ ಇತ್ತು ಅನ್ನುವಷ್ಟರಲ್ಲಿ ಅದ್ಯಾಕೋ ಮದುವೆ ಆದ ಮೇಲೆ ಅವನು ವಿಚಿತ್ರವಾಗಿ ಆಡೋಕೆ ಶುರು ಮಾಡಿದ್ದ. ಪ್ರತೀ ವಿಷಯಕ್ಕೂ ನನ್ಮೇಲೆ ಕೋಪಿಸಿಕೊಳ್ಳೋದು, ಸರಿಯಾಗಿ ಮನೆಗೆ ಬರದೇ ಇರೋದು, ನನ್ನನ್ನ ವಿನಾಕಾರಣ ವೈರಿಯಂತೆ ನೋಡೋದು. ಇದೆಲ್ಲ ದಿನನಿತ್ಯ ನಮ್ಮನೆಯಲ್ಲಿ ನಡೆಯೋ ದಿನಚರಿಯಂತೆ ಆಗಿ ಬಿಟ್ಟಿತ್ತು. ಮದುವೆ ಆದ್ಮೇಲೆ ಅವನಿಂದ ಪ್ರೀತಿ ಎನ್ನೋದು ಕೇವಲ 'ನಿರೀಕ್ಷೆ'ಯಾಗೇ ಉಳಿದುಹೋಯಿತು.ಇವತ್ತು ಸರಿ ಹೋಗ್ತಾನೆ, ನಾಳೆ ಸರಿಹೋಗ್ತಾನೇ ಅನ್ನೋ ಹುಸಿ ನಂಬಿಕೆಯಲ್ಲೇ ಒಂದು ವರ್ಷ ಕಳೆದುಹೋಯಿತು. ಅವನ ಈ ನಿಜ ಸ್ವಭಾವ ಮದುವೆಗೆ ಮುಂಚೆ ಪ್ರೀತಿಸುವಾಗ ಯಾಕೆ ಗೊತ್ತಾಗಲಿಲ್ಲ ಅಂತ ಅದೆಷ್ಟೇ ಯೋಚನೆ ಮಾಡಿದ್ರೂ ಉತ್ತರ ಮಾತ್ರ ಶೂನ್ಯವಾಗಿತ್ತು. ಆಮೇಲೆ ಬಂಗಾರದಂತ ಮಗು ಮನೆ ತುಂಬಿದರೂ ಕೂಡ ಅವನ ವರ್ತನೆಯಲ್ಲಿ ಬದಲಾವಣೆನೇ ಆಗಲಿಲ್ಲ. ಅವನೊಂದಿಗೆ ದಿನ ಕಳೆಯೋದು ಸಾಧ್ಯಾನೇ ಇಲ್ಲ ಅನ್ನಿಸಿದಾಗ ಅವನನ್ನ, ಅವನ ಮನೆಯನ್ನ ಕೊನೆಗೆ ನಾ ಇಷ್ಟಪಟ್ಟು ಸೇರಿದ ಬೆಂಗಳೂರನ್ನ ಬಿಟ್ಟು ಹಳ್ಳಿಯ ಅಪ್ಪನ ಮನೆಗೆ ಬಂದುಬಿಟ್ಟೆ. ಅವನು ಅದಕ್ಕೂ care ಮಾಡಲಿಲ್ಲ. ಮನಸ್ಸು ದಿನೇ ದಿನೇ ದುರ್ಬಲಗೊಳ್ಳುತ್ತಲೇ ಇತ್ತು. ಇದೇ ಯೋಚನೆಯಲ್ಲಿ ಹುಚ್ಚಿಯಾಗಿ ಬಿಡುತ್ತಿದ್ದೆನೇನೋ 

ಆದರೆ ಅದೊಂದು ಸಂಜೆ....

ನಮ್ಮನೆಯ ಪಕ್ಕದಲ್ಲಿದ್ದ ನದಿದಂಡೆಯ ಮೇಲೆ ಕುಳಿತಿದ್ದೆ. ನೆರೆಮನೆಯ ಮಕ್ಕಳೊಂದಿಗೆ ನನ್ನ ಮಗನೂ ಆಟವಾಡುತಿದ್ದ. ನದಿಯ ಆಚೆಯ ದಡವನ್ನೇ ದಿಟ್ಟಿಸುತಿದ್ದೆ. ಅದೇನೋ ಅವತ್ತು ಹೊಸತರದಂತೆ ಕಾಣಿಸ್ತು. ಎಲ್ಲೆಲ್ಲೂ ಹಸಿರು ತುಂಬಿತ್ತು. ಅರೆ... ನಿನ್ನೆ ಬಂದಾಗ ಹಿಂಗಿರಲಿಲ್ಲ ಅಲ್ವಾ? ಅಥವಾ ನಾನ್ ಗಮನಿಸಿರಲಿಲ್ವಾ? ಇಲ್ಲ ಚೈತ್ರಮಾಸವಿರಬೇಕು. ಬರಡಾಗಿದ್ದ ಮರಗಳು ಹೊಸಚಿಗುರಿನಿಂದ ಕಂಗೊಳಿಸುತ್ತ ಇದೆ. ಮುಳುಗುತಿದ್ದ ಆ ಸೂರ್ಯನ ತಂಪಾದ ಕಿರಣಗಳು ಭೂಮಿಯ ಹಸುರಿನ ಚೆಲುವನ್ನ ಇಮ್ಮಡಿಗೊಳಿಸಿತ್ತು. ಗೂಡು ಸೇರುವ ಅವಸರದಲ್ಲಿದ್ದ ಹಕ್ಕಿಗಳು ತಮ್ಮದೇ ಭಾಷೆಯಲ್ಲಿ ಏನೇನೋ ಸಂದೇಶ ವಿನಿಮಯಮಾಡಿಕೊಂಡಂತಿತ್ತು. ಇತ್ತೀಚೆಗೆ ಇವತ್ತೇ ಅನಿಸುತ್ತೆ ಮನಸ್ಸು ಸ್ವಲ್ಪ ಶಾಂತವಾಗಿರೋದು, ಖುಷಿಯಾಗಿರೋದು. ಪಕ್ಕದಲ್ಲೇ ಆಡುತಿದ್ದ ಮಗನನ್ನ ನೋಡಿದೆ. ಅರಿಯದ ಖುಷಿಯೊಂದು ಮುಗುಳುನಗುವಾಗಿ ಹೊರಬಂತು. ನಾನ್ಯಾಕೆ ನನ್ನ ಬದುಕನ್ನ ಕಟ್ಟಿಕೊಳ್ಳಬಾರದು? ಸಂಜೆ ಆಯಿತೆಂದರೆ ಮುಳುಗಲೇಬೇಕು ಅಂತ ಗೊತ್ತಿದ್ದರೂ ದಿನಬೆಳಗ್ಗೆ ಅದೇ ಉತ್ಸಾಹದಿಂದ ಸೂರ್ಯ ಮತ್ತೆ ಹುಟ್ಟಿ ಬರಲ್ವಾ? ಒಣಗಿರೋ ಮರ ಕೂಡ ನವವಸಂತಕ್ಕಾಗಿ ಕಾಯುತ್ತದಂತೆ. ನನ್ನ ಭಾವನೆಗೆ, ನನ್ನ ಪ್ರೀತಿಗೆ ಬೆಲೆನೇ ಕೊಡದ ಅವನ ನೆನಪಲ್ಲಿ ನನ್ನ ಬದುಕನ್ನ ಹಾಳು ಮಾಡಿಕೊಳ್ಳೋದು ಅದೆಷ್ಟು ಸರಿ? ಅವನು ನನ್ನ ಬದುಕಿಗೆ ಬರುವ ಮುಂಚೆ ಬದುಕಿರಲಿಲ್ವಾ ನಾನು? ಅದಕ್ಕಿಂತ ಚನ್ನಾಗೇ ಬದುಕಬಲ್ಲೆ


Hmmm  ನಾನು ಎಲ್ಲಿ ಸೋತಿದ್ದೆನೋ ಅಲ್ಲೇ ಮತ್ತೆ ಬದುಕನ್ನ ಪ್ರಾರಂಭಿಸುತ್ತೀನಿ. ಕಳೆದುಹೋದ ಕನಸುಗಳನ್ನ ಮತ್ತೆ ಹುಡುಕಿಕೊಳ್ಳುತ್ತೀನಿ. ಮತ್ತೆ ಗೆದ್ದು ತೋರಿಸ್ತೀನಿ. ಅವತ್ತೇ ನಿರ್ಧಾರ ಮಾಡಿಬಿಟ್ಟೆ..ಮತ್ತೆ ಬದುಕಿಬಿಡಬೇಕು ಎಂದು. ಮನೆಗೆ ಹೋಗಿ ಅಪ್ಪ-ಅಮ್ಮನ ಹತ್ತಿರ ನಾ ಮತ್ತೆ ಬೆಂಗಳೂರಿಗೆ ಹೋಗಿ ಕೆಲಸ ಮಾಡ್ತೀನಿ ಅಂತ ನನ್ನ ನಿರ್ಧಾರ ತಿಳಿಸಿದೆ. ಮಗಳು ಈಗಲಾದರೂ ಚೇತರಿಸಿಕೊಂಡಳಲ್ಲ ಅನ್ನೋ ಖುಷಿ ಅವರ ಕಂಗಳಲ್ಲಿ ಇತ್ತು. 
-----

ಇವತ್ತಿಂದ ನಂದೂ ಅಂತ ಹೊಸದೊಂದು ಜೀವನ ಶುರುವಾಗ್ತಾ ಇದೆ. ನನ್ನ ಪ್ರೀತಿಗೆ ಮೋಸವಾಯಿತಲ್ಲ ಅನ್ನೋ ನೋವಿಗೆ ಬದಲಾಗಿ ನಾನು ಏನನ್ನಾದರೂ ಸಾದಿಸುತ್ತೀನಿ ಅನ್ನೋ ಛಲವಿದೆ. ನನ್ನ ಮುಂದಿನ ಬದುಕು ಚೆನ್ನಾಗಿದ್ದೇ ಇರತ್ತೆ ಅಂತ ನಂಗ್ಯಾಕೋ ಬಲವಾಗಿ ಅನ್ನಿಸುತ್ತಿದೆ. 
-----

Train ನಲ್ಲಿ ನನ್ನೆದುರು ಕುಳಿತು ತನ್ನ ಕಥೆಯನ್ನ ಬಿಚ್ಚಿಟ್ಟಿದ್ದ ಆಕೆಯ ಕಂಗಳಲ್ಲಿ ಅದೇನೋ ಭರವಸೆಯ ಬೆಳಕೊಂದು ಟಿಸಿಲೊಡೆದಂತಾಯಿತು. ಓಡುತಿದ್ದ Trainನ ಕಿಟಕಿಯ ಸರಳಿನಿಂದಾಚೆಗಿನ ಪ್ರಪಂಚವನ್ನ ನೋಡ್ತಾ ಇದ್ದೆ. ಮನಸ್ಸಿನ ಪೂರ್ತಿ ಈಗಷ್ಟೇ ಕೇಳಿದ ಆಕೆಯ ಕಥೆಯೇ ಗುನುಗುಡುತ್ತಿತ್ತು. 

ಜೀವನದಲ್ಲಿ ಎದುರಾಗೋ ಕಷ್ಟಗಳು ಒಮ್ಮೊಮ್ಮೆ ನಮ್ಮನ್ನ ಮುಳುಗಿಸಲುಬಹುದು ಅಥವಾ ಛಲದಿಂದ ಹೊರಡೋ ಶಕ್ತಿಯನ್ನ ಕೊಡಬಹುದು. ಎಲ್ಲಾ  ನಿರ್ಧಾರ ಆಗೋದು ಆತ್ಮಬಲದ ಮೇಲೆ. ಇವಳೂ ಕೂಡ ಮುಳುಗಬಹುದಿತ್ತೇನೋ, ಆದರೆ ಆಕೆ ಹಾಗೆ ಆಗೋದಕ್ಕೆ ಬಿಡಲಿಲ್ಲ. ಯಾಕೆ ಗೊತ್ತಾ...?


ಅವಳೆಂದರೆ... 
ಕ್ಷಮಯಾಧರಿತ್ರಿ. ಬಾಳಲ್ಲಿ ಕುಗ್ಗಿಸೋ ಕಷ್ಟ ಬಂದರೂ ಅದನ್ನ ಹೊಡೆದೋಡಿಸಿ ಮತ್ತೆ ಎದ್ದು ನಿಲ್ಲುತ್ತೇನೆ ಅನ್ನೋ ಗಟ್ಟಿಗಿತ್ತಿ. ಮನಸ್ಸು ಮೃದುವಾಗಿರಬಹುದು, ಸೂಕ್ಷ್ಮವಾಗಿರಬಹುದು. ಆದರೆ ಬದುಕುವ ಕಲೆಯಿದೆಯಲ್ಲ? ಅದೇ ಸಾಕು ಅವಳನ್ನ ಮತ್ತೆ ಬದುಕಿಸಿಬಿಡುತ್ತದೆ. ಅವಳೆಂದರೆ ಬದುಕಿನ ಎಲ್ಲವನ್ನು ಎದುರಿಸಬಲ್ಲ ಶಕ್ತಿಯ ಆಗರ. 
ಅವಳೆಂದರೆ ಕಷ್ಟಗಳಿದ್ದರೂ ಮತ್ತೆ ಅರಳಿನಿಲ್ಲೋ ನಿತ್ಯ ಮಲ್ಲಿಗೆ. 
ಅವಳೆಂದರೆ ಎಲ್ಲವೂ....!!!

ಏನೋ ಹೇಳೋಣವೆಂದು ಅವಳೆಡೆಗೆ ತಿರುಗಿದೆ. ಅಮ್ಮ-ಮಗ ಇಬ್ಬರು ಬೆಚ್ಚಗೆ ಮಲಗಿ ಕನಸು ಕಾಣುತ್ತಿರುವಂತಿತ್ತು. "ದೇವರೇ ಅವಳ ಕೈ ಬಿಡಬೇಡ" ಅಂತ ತಣ್ಣಗೆ ಪ್ರಾರ್ಥಿಸಿದೆ. 
                                
                                    -ಮೇದಿನಿ. ಎಂ. ಭಟ್ 

 


Wednesday 8 March 2017

ಅವಳೆಂದರೆ...!!! ಸಂಚಿಕೆ - ೧


ಸಂಚಿಕೆ - ೧

ಗಂಟೆ 8 ಆದರೂ ಅದ್ಯಾಕೋ ಅವತ್ತು ಏಳೋ ಮನಸ್ಸೇ ಆಗಲಿಲ್ಲ. ಸಾಮಾನ್ಯವಾಗಿ 6.30 ರ ಮೇಲೆ ಮಲಗೋ ಜಾಯಮಾನವೇ ನನ್ನದಲ್ಲ. ಇವತ್ತು ಮಾತ್ರ ಇನ್ನೂ ಮಲಗೋಣ ಅಂತ ಅನ್ನಿಸುತ್ತಾ ಇತ್ತು. ಹಾಗೇ ಹಾಸಿಗೆಯಲ್ಲಿ ಹೊರಳುತ್ತಾ ಬಲ ಮಗ್ಗುಲಿಗೆ ತಿರುಗಿದವಳಿಗೆ ಮೊದಲು ಕಾಣಿಸಿದ್ದು ನನ್ನ ಟೇಬಲ್ ಮೇಲಿಟ್ಟಿದ್ದ ಕ್ಯಾಲೆಂಡರ್. ಅಬ್ಬಾ ಒಂದು ವಾರದ ಮೇಲಾಯಿತಲ್ಲವೇ ನಾವು ಬೆಂಗಳೂರಿಗೆ ಬಂದು.!

ನಾನು ಹುಟ್ಟಿದ್ದುಬೆಳೆದಿದ್ದು ಎಲ್ಲಾ ಮಹಾರಾಷ್ಟ್ರದಲ್ಲಿ. ಅಪ್ಪಂಗೆ Bank of Maharashtra ದಲ್ಲಿ ಕೆಲಸ. ಅಲ್ಲೇ ಓದನ್ನ ಮುಗಿಸಿದ ಮೇಲೆ Infosys ನಲ್ಲಿ ನಂಗೆ Job ಆಗಿದ್ದರಿಂದ ಅಪ್ಪ ಕೂಡ ಬೆಂಗಳೂರಿನ branch ಗೆ ವರ್ಗಾವಣೆ ತೆಗೆದುಕೊಂಡರು. ಬೆಂಗಳೂರಿಗೆ ಮೊದಲ ಸಲ ಬರ್ತಾ ಇದ್ರೂ ಕೂಡ, ಮೊದಲ ಸಲ ಅಂತ ಅನ್ನಿಸಲೇ ಇಲ್ಲ. ಯಾಕ್ ಗೊತ್ತ, ನಮ್ಮ ಅಪ್ಪ-ಅಮ್ಮ ಮೂಲತಃ ಕರ್ನಾಟಕದ ಮಲೆನಾಡಿನ ಒಂದು ಸಣ್ಣ ಹಳ್ಳಿಯವರು. ಕಾರಣ ಗೊತ್ತಿಲ್ಲ, ಆದರೆ ಅವರು 25 ವರುಷದಿಂದ ಮಹಾರಾಷ್ಟ್ರದಲ್ಲೆ settle ಆಗಿದ್ದರು. ಅಪ್ಪ-ಅಮ್ಮ ನನ್ನನ್ನ ಅಪ್ಪಟ ಕನ್ನಡತಿಯಾಗೇ ಬೆಳೆಸಿದ್ದರು. ಹಾಗಾಗಿ ಇಲ್ಲಿನ ವಾತಾವರಣ ನಂಗೆ ತುಂಬಾ different ಅಂತ ಅನ್ನಿಸಲೇ ಇಲ್ಲ.

ಹಾಗೇ ಎದ್ದು, ಅಲ್ಪ-ಸ್ವಲ್ಪ ಬಾಕಿ ಇದ್ದ ಮನೆಸಾಮಾನುಗಳನ್ನು ಜೋಡಿಸಿ, ಅಮ್ಮಂಗೆ ಮನೆ ಕ್ಲೀನ್ ಮಾಡಿ-ಅಡುಗೆ ಮಾಡೋಕೆ ಸಹಾಯ ಮಾಡಿ, ಹಾಗೆ-ಹೀಗೆ ಅನ್ನುವಷ್ಟರಲ್ಲೇ ಸಂಜೆ 4 ಗಂಟೆಯಾಗಿತ್ತು. Office ನಲ್ಲಿ ಹೊಸದಾಗಿ ಪರಿಚಯವಾದ ಗೆಳತಿಯೊಬ್ಬಳು ಅವರ ಮನೆಗೆ ಕರೆದಿದ್ದಳು. ಅವರ ಮನೆ ನಮ್ಮ Road ನ Cornerನಲ್ಲೆ ಇತ್ತು. ಶನಿವಾರ ಬೇರೆ ಆಗಿದ್ರಿಂದ, ಮಾಡೋಕೆ ಬೇರೆ ಏನೂ ಕೆಲಸ ಕೂಡ ಇರಲಿಲ್ಲವಾಗಿದ್ದರಿಂದ ಅವರ ಮನೆಗೆ ಹೋಗೋಣ ಅಂತ ಹೊರಟೆ.

ಅಲ್ಲಿ ಅವರ ಮನೆಯ terrace ನಲ್ಲಿ ಕುಳಿತು ಇಬ್ಬರು ಹರಟುತ್ತಿದ್ದರೆ ಇಬ್ಬರಿಗೂ ಸಮಯ ಸರಿದದ್ದೇ ತಿಳಿಯಲಿಲ್ಲ. ಬೀದಿ ದೀಪಗಳ ಬೆಳಕಿಗೆ ಸೆಡ್ಡುಹೊಡೆದಂತೆ ಬೆಳದಿಂಗಳು ನಗುತಿತ್ತು. ಜನರೆಲ್ಲಾ ಅದೇನೋ ಸಂಭ್ರಮದಲ್ಲಿ ಓಡಾಡುತ್ತಿದ್ದರು. ಮರುದಿನ ಸಂಕ್ರಾಂತಿ. ನಮ್ಮ ಇಡೀ road ಅದೇನೋ ಹೊಸತನದಿಂದ ಕಂಗೊಳಿಸುತ್ತಿತ್ತು. ಸುತ್ತಲೂ ಕಣ್ಣು ಹಾಯಿಸಿದವಳನ್ನ ಸೆಳೆದದ್ದು, terrace ನ ಇನ್ನೊಂದು ಮೂಲೆಯ ಬೆಂಚಿನ ಮೇಲೆ ಕುಳಿತು ಬೀದಿಯ ತುದಿಯನ್ನೇ ದಿಟ್ಟಿಸುತ್ತಾ ಯಾರದೋ ಬರುವಿಕೆಗಾಗಿ ಕಾಯುತ್ತಿರುವಂತಿದ್ದ ಹೊಳಪುಳ್ಳ ಕಂಗಳ ಅಜ್ಜಿ. ಅದ್ಯಾಕೋ ನಂಗೆ ಆಕೆಯನ್ನ ಮಾತಾಡಿಸಬೇಕು ಅಂತ ಅನ್ನಿಸಿತು. ಅವರ ಹತ್ತಿರ ಹೋಗಿ ನಿಂತೆ ಏನೋ ತುಂಬಾ ಪರಿಚಯದವಳಂತೆ. ನನ್ನನ್ನ ನೋಡುತ್ತಿದ್ದಂತೆಯೇ ಬೊಚ್ಚು ಬಾಯಿಂದ ನಗುವೊಂದು ಚಿಮ್ಮಿ "ಅಯ್ಯೋ ಚಿನ್ನಮ್ಮ, ಅದೆಷ್ಟು ಮುದ್ದಾಗಿದೀಯ" ಅಂತ ಕೈ ಅರಳಿಸಿ ದೃಷ್ಟಿ ತೆಗೆದು ಲಟಿಕೆ ಮುರಿದರು. ಆ ಸ್ಪರ್ಶದಲ್ಲಿ, ಆ ನಗುವಲ್ಲಿ ಅದೇನೇನೋ ವಿಶೇಷತೆ ಇದೆ ಅನ್ನಿಸಿತು. ಹಾಗೇ ಅವರ ಪಕ್ಕದಲ್ಲಿ ಕುಳಿತೆ.

"ಅಜ್ಜಿಗೆ ಮಕ್ಕಳೆಂದರೆ ತುಂಬಾ ಇಷ್ಟ ಕಣೆ. ನಮ್ಮ ಪಕ್ಕದ ಮನೆ ಅಜ್ಜಿ ಇವರು. ನೀವಿಬ್ಬರೂ ಮಾತಾಡ್ತಾ ಇರಿ. ನಮ್ಮಮ್ಮ ಯಾಕೋ ಕರೀತಾ ಇದಾರೆ. ಹೋಗಿ ಬರುತ್ತೇನೆ" ಎಂದು ನನ್ನ ಗೆಳತಿ ಕೆಳಗಡೆ ಹೋದಳು.

ನಮ್ಮಿಬ್ಬರ ಸಂಭಾಷಣೆ ಮುಂದುವರೆದಿತ್ತು.
ನಾನು: ಅಜ್ಜಿ ನಿಮ್ಮನೇಲಿ ಸಂಕ್ರಾಂತಿ ಇಲ್ಲ್ವಾ? ಯಾಕಿಷ್ಟು ಸಪ್ಪೆಯಾಗಿ ಇಲ್ಲಿ ಕುಳಿತಿದೀರಾ?
ಅಜ್ಜಿ: ಯಾಕಿಲ್ಲಾ? ಹಬ್ಬವನ್ನ ಮನೇಲಿ ಮಾಡ್ತಾರೆ. ಆದರೆ ನನಗೆ ಸಂಕ್ರಾಂತಿ ಎಲ್ಲ ಮುಗಿದು ಎಷ್ಟೋ ಕಾಲ ಆಯಿತು.
ಅಜ್ಜಿ ಅದ್ಯಾವುದೋ ಮಾಸದ ನೆನಪುಗಳ ಮದ್ಯೆ ಹುದುಗುತ್ತಾ ಇದ್ದಾರೆ ಅನ್ನಿಸ್ತು. ನಾನ್ ಹೇಗೆ ಮುಂದುವರೆಸಬೇಕು ಅಂತ ತಿಳಿಯದೆ ಅವರನ್ನೇ ನೋಡುತ್ತಿದ್ದೆ. ನಂತರ ಅವರೇ ಮುಂದುವರೆಸಿದರು.

ಅಜ್ಜಿ: ಈಗ ನಾನ್ ಇರೋದು ನನ್ನ ಮಗಳ ಮನೆಯಲ್ಲಿ. ನನ್ನ ಮಗಳು-ಅಳಿಯ ನನ್ನನ್ನ ಚನ್ನಾಗೇ ನೋಡಿಕೊಳ್ಳುತ್ತಾರೆ. ಆದರೂ ಅದೇನೋ ಅಪೂರ್ಣತೆ. ನಂಗೆ ಒಬ್ಬ ಮಗ ಮತ್ತೆ ಮಗಳು. ಅವತ್ತೂ ಅಷ್ಟೇ ಮರುದಿನ ಅಂದ್ರೆ ಸಂಕ್ರಾಂತಿ. ಆಗ ತಾನೇ ಕಾಲೇಜು ಮುಗಿಸಿದ್ದ ಮಗ, ಬೇರಾವುದೋ ಜಾತಿಯ ಹುಡುಗಿಯನ್ನ ಪ್ರೀತಿಸುತ್ತಾ ಇದೀನಿ, ನಾನ್ ಅವಳನ್ನೇ ಮದುವೆಯಾಗೋದು ಅಂತ ಖಡಾ-ಖಂಡಿತವೆನ್ನುವಂತೆ ಹೇಳಿಬಿಟ್ಟ. ನನಗೆ ಸುತಾರಾಂ ಇಷ್ಟ ಇರಲಿಲ್ಲ. ನಮ್ಮಿಬ್ಬರ  ನಡುವೆ ತುಂಬಾನೇ ಮಾತಿನ ಪೈಪೋಟಿಯಾಯಿತು. ಅವತ್ತು ದಿನವಿಡೀ ಮನೆಯಲ್ಲಿ ಇದೇ ಜಗಳ. ಕೊನೆಗೊ ನಾನು ಒಪ್ಪಿಕೊಳ್ಳಲಿಲ್ಲ. ಅವತ್ತು ರಾತ್ರಿ ಮಲಗಿದಾಗ ಇದೇ ಚಿಂತೆಯಲ್ಲಿ ನಿದ್ರೆ ಹತ್ತಿರವೂ ಸುಳಿಯಲಿಲ್ಲ. 'ಇವರು ಇದ್ದಿದ್ರೆ' ಅಂತ ಅನಿಸ್ತು ಒಂದ್ಸಲ. ಯೋಚನೆ ಮಾಡಿ ಮಾಡಿ ಬೆಳಗಿನ ಜಾವದಲ್ಲಿ 'ಆದದ್ದು ಆಗಲಿ ಎಲ್ಲಾ ದೇವರಿಚ್ಛೆ, ಅವರಿಬ್ಬರಿಗೂ ಮದುವೆ ಮಾಡಿಸಿದರಾಯಿತು' ಅಂತ ನಿರ್ದರಿಸುವಾಗಲೇ ಜಾವದ ಒಂದು ನಿದ್ದೆ ಸುಳಿದದ್ದು. ಬೆಳಗೆ ಎದ್ದು ನೋಡಿದರೆ ನನ್ನ ಮಗ ಕಾಣಲೇ ಇಲ್ಲ. ಇಡೀ ಮನೆ ಹುಡುಕಿದರೂ ಅವನ ಸುಳಿವಿರಲಿಲ್ಲ. ಹಬ್ಬದ ಸಂಭ್ರಮದಲ್ಲಿರಬೇಕಾದ ಮನೆಯನ್ನ ಬರಿದುಗೊಳಿಸಿ ಹೊರಟುಹೋದವನ ಸುಳಿವು ಮತ್ತೆ ಯಾವತ್ತೂ ಸಿಗಲಿಲ್ಲ. ಇದ್ದೊಬ್ಬ ಮಗಳನ್ನ ಮದುವೆ ಮಾಡಿ, ಬರಿದಾದ ಮನೆ, ಅಲ್ಲಿಯ ನೆನಪುಗಳನ್ನೆಲ್ಲ ನಮ್ಮ ಹಳ್ಳಿಯ ಮನೆಯಲ್ಲೇ ಬಿಟ್ಟು ಮಗಳೊಂದಿಗೆ ಇಲ್ಲಿಗೆ ಬಂದು ಬಿಟ್ಟೆ. ಅಷ್ಟರ ಮೇಲೆ ಪ್ರತೀ ಸಂಕ್ರಾಂತಿ ದಿನ ಹೀಗೆ ಕಾಯುತ್ತಾ ಇದೀನಿ ಯಾವತ್ತಾದರೂ ನನ್ನ ಮಗ ಬರಬಹುದೆಂದು. ಅಜ್ಜಿಯ ಕಣ್ಣಾಲಿಗಳು ತುಂಬಿ ಬಂದಿದ್ದವು.

ಸುತ್ತಲೂ ಸಂಭ್ರಮದ ವಾತಾವರಣ ಇದ್ದಿದ್ದರೂ terrace ನ ಮೇಲೆ ಮಾತ್ರ ಸ್ಮಶಾನ ಮೌನದ ಭೀತಿ ಕಾಡಿದಂತಿತ್ತು.

ಸಮಯವಾಗಿದ್ದರಿಂದ ನಾನು ಮನೆಗೆ ಹೊರಟೆ. ಅಜ್ಜಿ ಅದೆಷ್ಟು ಹೊತ್ತು ಅಲ್ಲೇ ಕುಳಿತಿದ್ದಳೋ ಗೊತ್ತಿಲ್ಲ. ರಾತ್ರಿ ಮಲಗಿದ ಮೇಲೂ ಕನಸಲ್ಲೆಲ್ಲ ಅಜ್ಜಿ ಅಳುತ್ತಾ ಇರುವಂತೆ ಬಾಸವಾಗುತಿತ್ತು. ಮರುದಿನ, ಹಬ್ಬದ ಕಾರಣಕ್ಕೆ ನಮ್ಮನೆಯಲ್ಲಿ ಎಂದಿಗಿಂತ ಬೇಗನೆ ಬೆಳಗಾಗಿತ್ತು. ಬೆಳಗಿನ ಕೆಲಸಗಳನ್ನೆಲ್ಲ ಮುಗಿಸಿ ಅಪ್ಪ-ಅಮ್ಮ ಇಬ್ಬರೂ ಎಲ್ಲೋ ದೂರ ಪ್ರಯಾಣ ಬೆಳೆಸುವ ತಯಾರಿಯಲ್ಲಿರುವಂತೆ ಕಂಡರು. ಏನಿದೆಲ್ಲ ಅಂತ ಆಶ್ಚರ್ಯವಾಗಿ ನೋಡುತಿದ್ದ ನನ್ನನ್ನ ನೋಡಿ ಅಪ್ಪ ಕತೆ ಹೇಳೋಕೆ ಶುರುಮಾಡಿದರು.
"ನಾವು ಮೂರೂ ಜನ ಇವತ್ತು ನಮ್ಮ ಹಳ್ಳಿಗೆ ಹೋಗ್ತಾ ಇದೀವಿ. ನೀನ್ಯಾವಾಗಲೂ ಕೇಳುತ್ತಾ ಇದ್ಯಲ ನಿನ್ನ ಅಜ್ಜಿಯ ಬಗ್ಗೆ...ಅವರನ್ನ ನೋಡೋಕೆ. ಇದು 25 ವರ್ಷದ ಹಿಂದಿನ ಕತೆ………………………..!"


ಅಪ್ಪ ಕತೆ ಹೇಳಿ ಮುಗಿಸುವಾಗ ಎಲ್ಲರ ಮನೆ-ಮನಸ್ಸಲ್ಲೂ ಸಂಕ್ರಾಂತಿಯ ಸಂಭ್ರಮ ಮತ್ತೆ ಬಂದಂತಾಗಿತ್ತು.
                                                                                                         

ಅವಳೆಂದರೆ... 
ತನಗೆ ಮಗುವಾದಾಗ ಮತ್ತೆ ಹುಟ್ಟೋ ಅಮ್ಮ. ಮಮತಾಮಯಿ, ಸ್ನೇಹಮಯಿ, ಕರುಣಾಮಯಿ. ಅವಳ ಉದಾರತೆಗೆ, ಅವಳು ನೀಡುವ ಪ್ರೀತಿಯ ಅಮೃತಕ್ಕೆ ಸರಿಸಾಟಿ ಯಾವುದಾರೂ ಉಂಟಾ?? ತನ್ನ ಮಕ್ಕಳಿಗಾಗಿ ಜೀವನದ ಸರ್ವಸ್ವವನ್ನೂ ಸವೆಸಿಬಿಡಬಲ್ಲಳು. ಮಕ್ಕಳು ದೊಡ್ಡವರಾದ ಮೇಲೆ ತಮ್ಮ ಬದುಕನ್ನ ಅರಸಿ ಹೊರಟರೂ ಅವರು ಮತ್ತೆ ಮಗುವಾಗಿ ತನ್ನ ಮಡಿಲಿಗೆ ಬಂದೇ ಬರ್ತಾರೆ ಅಂತ ಉಸಿರು ಬಿಗಿ ಹಿಡಿದು ಕಾದುಬಿಡುತ್ತಾಳೆ ಬೇಕಿದ್ರೆ. ಇಡೀ ಲೋಕವನ್ನ ತನ್ನ ಮೂರ್ತ ಪ್ರೇಮದೆಡೆಗೆ ಸೆಳೆಯೋ ವಿಶಾಲ ಹೃದಯಿ ಆಕೆ.
ಅವಳೆಂದರೆ... ನಮಗೆಲ್ಲಾ ಜಗತ್ತಿನ ಬೆಳಕನ್ನ ತೋರಿಸಿ ತಾನು ಕತ್ತಲೆಯಲ್ಲೇ ನಿಂತು ನಮ್ಮನ್ನ ನೋಡಿ ಖುಷಿ ಪಡುವವಳು.
ಅವಳೆಂದರೆ... ಸದಾ ಒಳಿತನ್ನ ಹರಸಿ ನಮ್ಮನ್ನ ಪೋಷಿಸಿ ಪೊರೆಯೊ ಜೀವ.
ಅವಳೆಂದರೆ .....ಎಲ್ಲವೂ !

------------------------

ಜಗತ್ತಿನ ಎಲ್ಲಾ ತಾಯಂದಿರಿಗೂ "ಅವಳೆಂದರೆ" ಕಥಾ ಹಂದರದ ಈ ಸಂಚಿಕೆ ಸಮರ್ಪಣೆ.


                                                                                                          -ಮೇದಿನಿ ಎಂ ಭಟ್