Friday 25 November 2016

ಶರಧಿ...!!

ಶರಧಿ...!!

ಬತ್ತದ ಜೀವ ಸೆಲೆಯನ್ನ ತುಂಬಿಕೊಂಡಿರೋ ಆ ಸಮುದ್ರ ನೋಡೇ, ಅಪ್ಪ ನಂಗೆ ಈ ಹೆಸರಿಟ್ಟರು ಅನ್ನಿಸುತ್ತೆ. ದಡ ಮುಟ್ಟಿ ಮುಟ್ಟಿ ಮತ್ತದೇ ಪ್ರೀತಿಗೆ ಹಂಬಲಿಸುವ ತೀರದ ಅಲೆಯಂತೆ ಜೀವನವನ್ನ ಪ್ರೀತಿಸಬೇಕು ಅನ್ನೋ ಹಂಬಲ ನನಗೆ, ಸ್ನೇಹಕ್ಕೆ ಜೀವ ಬೇಕಿದ್ರೂ ಕೊಡಬೇಕು ಅನ್ನೋ ಆಸೆ, ಖುಷಿಯಾಗಿರೋಕೆ ಒಂದು ಕಾರಣ ಬೇಕು ಅನ್ನೋ ಸಿದ್ದಾಂತ ನನ್ನದಲ್ಲ. ಆಗಾಗ ಎದುರಾಗೋ ಪರಿಸ್ಥಿತಿಗೆ ಬರೋ ಕಣ್ಣೇರು ಸಹ ನನ್ನದಲ್ಲ ಅಂತ ಅಂದುಕೊಂಡು ಸುಮ್ಮನಾಗಿಬಿಡುವವಳು ನಾನು. ನನ್ನ ಮೇಲೆ ಸಾವಿರ ಕನಸುಗಳನ್ನ ಇಟ್ಟುಕೊಂಡಿರೋ ಅಪ್ಪ-ಅಮ್ಮರನ್ನ ಪ್ರೀತಿಯ ತೊಟ್ಟಿಲಲ್ಲಿ ತೂಗಬೇಕು ಅನ್ನೋ ಕನಸು, ಚಿಕ್ಕ ಖುಷಿ ಇದ್ದರೂ ಸಾಕು ಮಗುವಂತೆ ಪ್ರಪಂಚ ಮರೆಯುವವಳು. ಒಟ್ಟಿನಲ್ಲಿ ಹೇಳಬೇಕೆಂದರೆ ಜೀವನದ ಪ್ರತೀ ಕ್ಷಣಗಳನ್ನ ಬದುಕುವವಳೇ ಈ ಶರಧಿ.

ಇವತ್ತಿನ ಖುಷಿಯನ್ನ ತನ್ನ Dairy ಯಲ್ಲಿ ದಾಖಲಿಸಲು ತೆಗೆದಾಗ ಕಂಡ ಮೊದಲ ಪುಟವನ್ನ ಮತ್ತೆ ಮತ್ತೆ ಓದಿಕೊಂಡಳು. Dairyಯ ಹೊಸ ಪುಟಗಳನ್ನ ತೆಗೆದು ಬರೆಯಲಾರಂಭಿಸಿದಳು. 

6th November 2016

ಇವತ್ತು ನನ್ನ ಮೊದಲ National Dance Competition. ಎಲ್ಲಾ ಕ್ಯಾಮರಾಗಳು, ಹಾಗೆ ಸೇರಿದ್ದ ಜನರೆಲ್ಲರ ದೃಷ್ಟಿ ನನ್ನ ಮೇಲೆ ಕೇಂದ್ರೀಕೃತವಾಗಿತ್ತು. ನನ್ನ ಜೀವನದಲ್ಲಿ ಇಂತ ಒಳ್ಳೆ ದಿನ ಬರತ್ತೆ ಅಂತ ಅಂದುಕೊಂಡೇ ಇರಲಿಲ್ಲ. ಜೀವನದ ಅಷ್ಟೂ ಖುಷಿ ಈ ಒಂದು Event ಗಾಗಿ ಕಾಯ್ತಾ ಇತ್ತೇನೋ ಅನ್ನೋ ತರ, ಮನಸಲ್ಲಿ ಸಾವಿರ ಕನಸುಗಳ ಪ್ರತಿಫಲನವಾಗುತಿತ್ತು. ಹೌದು ಇದು ನನ್ನ ಜೀವನದ ಅತ್ಯಮೂಲ್ಯ ಕ್ಷಣ ಅಂದರೂ ತಪ್ಪಾಗಲ್ಲ. ಹಾಗೇ ಆ ಮಹತ್ವಾಕಾಂಕ್ಷೆಯ Competition ನಲ್ಲಿ ನಂಗೆ first place  ಬಂದಿದೆ ಅಂತ ಗೊತ್ತಾದಾಗ ನನ್ನ ಖುಷಿಯ ಪಾರಕ್ಕೆ ಇನ್ನೊಂದು ಗರಿ ಬಂದಿತ್ತು. ನನ್ನ ಪ್ರಕಾರ ಈ  Competition ಎಲ್ಲ ಕೇವಲ ನೆಪ ಮಾತ್ರ. ಯಾವಾಗ ಈ ಹಾಡು dance ಅನ್ನು ನನ್ನ ಉಸಿರಂತೆ ಪ್ರೀತಿಸಬೇಕು ಅಂತ ನಿರ್ಧಾರ ಮಾಡಿದ್ದೇನೋ ಅವತ್ತೇ ನನ್ನ ಯಶಸ್ಸಿನ ಪಯಣ ಶುರುವಾಗಿದ್ದಾಗಿದೆ. 

ಪ್ರಪಂಚಾನೇ ಗೆದ್ದಿರೋ ಸಂಭ್ರಮದಲ್ಲಿ ಮನೆಗೆ ಬಂದೆ. ರವಿತೇಜ ರಂಗಿನಾಟ ಮುಗಿಸಿ ತಣ್ಣಗಾಗಿದ್ದ. ಹಸಿರಿತ್ತು, ಚೆಲುವಿತ್ತು ಎಲ್ಲೆಲ್ಲೂ ಸೌಗಂಧದ ಕಂಪಿತ್ತು. ಸಂಪೂರ್ಣ ವಾತಾವರಣ ನಾನು 'ತುಂಬಾ' ಇಷ್ಟ ಪಡೋ ತರ ಇತ್ತು. ಜೊತೆಗೆ ಇಡೀ ಪ್ರಪಂಚ ನನ್ನ ಯಶಸ್ಸಿಗೆ ಚಪ್ಪಾಳೆ ತಟ್ಟುತ್ತಿದೆ. ಆದರೆ ನನ್ನೀ ಯಶಸ್ಸಿಗೆ ಕಾರಣರಾದ ನನ್ನದೇ ಪುಟ್ಟ ಪ್ರಪಂಚವಾಗಿದ್ದ ನನ್ನ ಅಪ್ಪ-ಅಮ್ಮ  ಈ ಖುಷಿಯನ್ನ ಹಂಚಿಕೊಳ್ಳೋಕೆ ಈ ಕ್ಷಣ ನನ್ನೊಂದಿಗಿಲ್ಲ. ಅಪ್ಪಂಗೆ ಯಾವುದೋ Conference ಅಂತೆ, ಇಬ್ಬರೂ USAಗೆ ಹೋಗಿದಾರೆ. ನನ್ನ ಈ ಯಶಸ್ಸಿನ ಕೀರ್ತಿ ಅವರಿಬ್ಬರಿಗೆ ಸೇರಿದ್ದು. ಯಾಕೋ ಇವತ್ತು ಅವರನ್ನು ತುಂಬಾ miss ಮಾಡ್ಕೋತಾ ಇದೀನಿ ಅನ್ನಿಸ್ತು. ಅಪ್ಪನೊಂದಿಗೆ SkypeChat ಮಾಡಿದೆ. ಆದರೂ ಯಾಕೋ ಸಮಾಧಾನವೇ ಆಗಲಿಲ್ಲ. ಹಾಗೆ Laptop ಮಡಿಚಿಟ್ಟು table ಮೇಲೆ ತಲೆಯಾನಿಸಿ ಮಲಗಿದವಳನ್ನ ಅಲ್ಲೇ ಪಕ್ಕದಲ್ಲೇ ಹೂದಾನಿಯಲ್ಲಿದ್ದ ನವಿಲು ಗರಿಯು ಕಚಗುಳಿ ಇಟ್ಟಾಗ, ಅಮ್ಮನ ನೆನಪಾಗಿ ಅದ್ಯಾಕೋ ದುಃಖ ಉಮ್ಮಳಿಸಿ ಬಂತು. ಛೆ! ನಾನೂ ಅವರುಗಳ ಜೊತೆ USA ಗೆ ಹೋಗಿದಿದ್ದರೆ ಅಂತ ಅನ್ನಿಸಿತು. ತಲೆ ಎತ್ತಿ ನೋಡಿದಾಗ table ನ ಮೂಲೆಯಲ್ಲಿ ಜತನವಾಗಿ ಎತ್ತಿಟ್ಟಿದ್ದ ನನ್ನ ಈ Dairy ಕಾಣಿಸಿತು. ನನ್ನ ಕೈಗಳು ಅನಾಯಾಸವಾಗಿ Dairy ಎತ್ತಿಕೊಂಡಿತು. 


                                                                            *****           


ಶರಧಿಗೀಗ ಅಚಾನಕ್ ಆಗಿ ಅದ್ಯಾಕೋ ಹಿಂದಿನ ದಿನಗಳು ನೆನಪಾಗತೊಡಗಿತು. ಅವಳಿಗೇ ಅರಿವಿಲ್ಲದಂತೆ Dairyಯ ಪುಟಗಳನ್ನು ತಿರುವಲಾರಂಭಿಸಿದಳು.    

25th October 2016

ಈ ದಿನಕ್ಕಾಗಿ 2 ವರುಷದಿಂದ ಕಾದಿದ್ದೆ. ನನ್ನ Best Friend ಶಿಶಿರ್ Singapore ನಿಂದ ವಾಪಸ್ ಬಂದಿದ್ದ. ನಾವಿಬ್ಬರೂ ಚಿಕ್ಕಂದಿನಿಂದಲೂ friends. ನಮ್ಮಿಬ್ಬರ ಅಭಿರುಚಿ, Likes-Dislikes ಎಲ್ಲವೂ 100% ಅಲ್ಲದಿದ್ದರೂ, 90% ಹೊಂದಾಣಿಕೆ ಆಗ್ತಾ ಇತ್ತು. ಅದು, ನಾವು ಹೇಗೆ ಸಮಾನ ಮನಸ್ಕರೊಂದಿಗೆ ಬೇಗ ಹೊಂದಿಕೊಳ್ಳುತ್ತೇವೆ ಅಂತಾನೋ ಅಥವಾ ನಾವಿಬ್ಬರು ಚಿಕ್ಕಂದಿನಿಂದ ಒಟ್ಟಿಗೆ ಬೆಳೆದಿದ್ದಕ್ಕೋ ಗೊತ್ತಿಲ್ಲ, ನಾವಿಬ್ಬರು ಯೋಚನೆ ಮಾಡೋ ರೀತಿ, ಹಾಗೆ ನಮ್ಮಿಬ್ಬರ ಭಾವನೆಗಳು ಸಹ ಒಂದೇ ತರ ಇರ್ತ ಇದ್ದವು. ನನ್ನ ಜೀವನದಲ್ಲಿ ನಡೆದ ಪ್ರತೀ ವಿಷಯವನ್ನು, ನನ್ನ ಮನಸ್ಸಿಗೆ ಬಾರೋ ಪ್ರತೀ ಭಾವನೆಯನ್ನ ಅವನೊಂದಿಗೆ ಹೇಳಿಕೊಂಡರೇನೇ ಅದೇನೋ ಸಮಾಧಾನ. ಅಂತವನು ಈಗ 2 ವರುಷದ ಹಿಂದೆ Singapore ಗೆ ಹೋದಾಗಲೂ ನಮ್ಮಿಬ್ಬರ ಭಾಂದವ್ಯದಲ್ಲಿ ವ್ಯತ್ಯಾಸ ಆಗಿರಲಿಲ್ಲ. ಒಂದು ವಾರದ ಹಿಂದಷ್ಟೇ ನನ್ನ ಮತ್ತೆ ಸಾಗರ್ ನ Relationship End ಆದಾಗ, ಜೀವನದಲ್ಲಿ ಮೊದಲ ಸಲ ಕಣೀರು ಬತ್ತುವ ಹಾಗೆ ಅತ್ತಿದ್ದೆ. ಸಮಾಧಾನದ ಆಸರೆಯನ್ನು ಹಂಬಲಿಸಿ ಇವನಿಗೆ Call ಮಾಡಿದ್ರೆ ಮಾತಾಡೋಕೆ ಸಿಕ್ಕಿರಲಿಲ್ಲ. 4 ತಾಸಿನ ಮೇಲೆ message ಒಂದನ್ನು ಕಳಿಸಿದ್ದ. "ಶಾರಿ ಸ್ವಲ್ಪ busy ಇದ್ದೀನಿ ಕಣೇ. ಹೇಗಿದ್ದರೂ ಮುಂದಿನ ವಾರ ಬರ್ತಾ ಇದೀನಲ್ಲಾ, ಆಗ meet ಆಗೋಣ. Takecare till then" ಅಂತ. 

ಹಾಗೆ ಇವತ್ತು ಬೆಳಗ್ಗೆ ಅಷ್ಟೇ Singapore ನಿಂದ ಬಂದು, ಸಂಜೆ ನನ್ನ meet ಮಾಡಿದ್ದ ಕೂಡ. ಆದರೆ ಸದಾ ವಟ-ವಟ ಅಂತ ಮಾತಾಡ್ತಾ ಇದ್ದ ನನ್ನ  ಮನಸ್ಸಲ್ಲಿ ಮಾತು ಖಾಲಿ ಆಗಿ ಮೌನ ಮನೆ ಮಾಡಿತ್ತು. ಯಾಕೆ ಅಂತ ಗೊತ್ತಿಲ್ಲ, 3 ಗಂಟೆಯ ಆ meet ನಲ್ಲಿ ನಾವು infact ನಾನು ಏನೇನು ಮಾತಾಡಲಿಲ್ಲ. ಅವನೇ Singapore ಕಥೆಗಳನ್ನು ಹೇಳುತ್ತಾ ಇದ್ದರೆ ನಾನು ಹೂ ಗುಡುತ್ತಿದ್ದೆ ಅಷ್ಟೇ. ಅವನನ್ನ ನೋಡಿದರೇ ಸಾಕು ಮನಸ್ಸಿನ ಎಲ್ಲಾ ಭಾವನೆಗಳಿಗೂ ಪದ ರೂಪ ಬರುತ್ತಾ ಇತ್ತು. ಆದರೆ ಇವತ್ತು "ಮತ್ತೆ ಹೇಳು ಶಾರಿ ಏನ್ ಸಮಾಚಾರ" ಅಂತ ಅವನು 100 ಸಲ ಕೇಳುತ್ತಾ ಇದ್ದರೂ "ಏನಿಲ್ಲವೊ ನೀನೇ ಹೇಳಬೇಕು" ಅನ್ನೋ Common dialogue ನಂದಾಗಿತ್ತು. ಈ 2 ವರುಷದಲ್ಲಿ ಅವನು Singapore ನಲ್ಲಿರುವಾಗ Skype ನಲ್ಲಿ ಗಂಟೆಗಟ್ಟಲೆ video chat ಮಾಡಿ ಅದೆಷ್ಟೇ ಹರಟೆ ಹೊಡಿತಾ ಇದ್ದಿದ್ದರೂ ಇವನು ಆದಷ್ಟು ಬೇಗ India ಗೆ ಬರಬಾರದ ಅಂತ ಅನ್ನಿಸುತ್ತಲೇ ಇತ್ತು. ಆದರೆ ಈಗ ಶಿಶಿರ್ ನನ್ನ ಕಣ್ಣ ಮುಂದೇನೆ ಇದ್ದರೂ ಏನೂ ಮಾತಾಡೋಕೆ ಆಗ್ತಾ ಇಲ್ಲ.        

ಯಾಕಿರಬಹುದು...!? ಇವನತ್ರ 'ಅದರ ಬಗ್ಗೆ ಹೇಳಬೇಕು, ಈ ವಿಷಯ ಮಾತಾಡಬೇಕು' ಅಂತ ಏನೇನೋ ದೊಡ್ಡ list ಮಾಡಿಕೊಂಡಿದ್ದು ತಲೆಯಲ್ಲಿ ಬರುತ್ತಾ ಇದ್ದರೂ ಅದಕ್ಕೆ ಸರಿಯಾದ ಪದ ರೂಪ ಸಿಗ್ತಾ ಇರಲಿಲ್ಲ. ಅವತ್ತು ಇಬ್ಬರೂ ಒಟ್ಟಿಗೇ ಊಟ ಮಾಡಬೇಕು ಅಂತ ನಿರ್ಧಾರ ಆಗಿತ್ತು. ಆದರೆ ನನಗ್ಯಾಕೋ ಆ ನಿರ್ಲಿಪ್ತ ಭಾವದೊಂದಿಗೆ ಅಲ್ಲಿ ಇರಲು ಆಗಲೇ ಇಲ್ಲ. ಕೊನೆಗೆ ನಾನೇ "Hey ಇನ್ನೊಂದಿನ ಸಿಗೋಣ ಕಣೋ, ಮನೆಗೆ guest ಬಂದಿದ್ದಾರೆ, ನಾನು ಹೋಗಬೇಕು" ಅಂತ ಸುಳ್ಳು ಹೇಳಿದೆ. ಅವನಿಗೆ Bye ಹೇಳಿ ವಾಪಸ್ ತಿರುಗಿ ಮನೆ ಕಡೆ ಹೆಜ್ಜೆ ಹಾಕುತ್ತಾ ಇದ್ದವಳ ಕಣ್ಣಲ್ಲಿ ನನಗೇ ಅರಿವಿಲ್ಲದೆ ಕಣ್ಣೀರು ತುಂಬಿತ್ತು...! 

ನಾನು-ಅವನು ದೂರ ಆಗಿದೀವ? ನಮ್ಮಿಬ್ಬರ relationship ನಲ್ಲಿ ಏನಾದರು ಬದಲಾವಣೆ ಆಗಿದ್ಯಾ? ನಾನಾಗಲಿ ಅಥವಾ ಅವನಾಗಲಿ ಬದಲಾಗಿದ್ದೇವಾ ? ಅಥವಾ ಈ 'ಪೇಲವ' ಭಾವ ಇವತ್ತೊಂದಿನ, ಈ ಕ್ಷಣಕ್ಕೆ ಮಾತ್ರಾನಾ ? ಗೊತ್ತಾಗ್ತಾ ಇಲ್ಲ. 


                                                                            *****           

  
ಕಿಟಕಿಯ ಪಕ್ಕ ಕುಳಿತು ತನ್ನದೇ Dairy ಓದುತ್ತಿದ್ದವಳಿಗೆ, ಕೈ ಮೇಲೆ ಮಳೆ ಹನಿಯೊಂದು ಪಟ್ ಅಂತ ಬಿದ್ದಾಗ ವಾಸ್ತವಕ್ಕೆ ಬಂದಳು. ಆಕಾಶ ತುಂಬಾ ಕಪ್ಪಾಗಿತ್ತು. ಅರೆ ಕ್ಷಣದಲ್ಲಿ ಜೋರಾಗಿ ಮಳೆ ಸುರಿಯೋ ಎಲ್ಲಾ ಲಕ್ಷಣ ಇದೆ ಅಂತ ಅಂದುಕೊಳ್ಳುತ್ತಿರುವಾಗಲೇ, ಮಳೆ ಧೋ ಎಂದು ಸುರಿಯಲಾರಂಭಿಸಿತು. ಅವತ್ತೂ ಅಷ್ಟೇ, ಇದೇ ತರ ಮಳೆ ಬರ್ತಾ ಇತ್ತು. Dairy ಯ ಪುಟಗಳನ್ನ ಇನ್ನೂ ಹಿಂದಕ್ಕೆ ತೆಗೆದಳು. 

18th October 2016


ಸಾಗರ್ ದೊಡ್ಡ ಧ್ವನಿಯಲ್ಲಿ ಕಿರಿಚುತ್ತಲೇ ಇದ್ದ. "No ಶರಧಿ, ನನ್ನ ಹೆಂಡತಿ ಆಗೊಳು ನೀನು. ನೀನ್ ಈ ತರ ಎಲ್ಲರ ಮುಂದೆ ಹಾಡೋದು, ಭರತನಾಟ್ಯ ಮಾಡೋದು ಅದೆಲ್ಲ ನಂಗಿಷ್ಟ ಆಗಲ್ಲ. ಮದುವೆ ಆದ ಮೇಲ ನೀನು ಇದನ್ನೆಲ್ಲ ನಿಲ್ಲಿಸಬೇಕು, okay" ಇನ್ನೂ ಏನೇನೋ ಹೇಳುತ್ತಲೇ ಇದ್ದ. ಇದೇನು ಮೊದಲಲ್ಲ, ಅವನು ಈ ರೀತಿ ಹೇಳುತ್ತಿರುವುದು. ನಾವಿಬ್ಬರು Commit ಆಗಿ ಈ ಒಂದು ವರುಷದಲ್ಲಿ ತುಂಬಾನೇ ಸಲ ಇದರ ಬಗ್ಗೆ ಚರ್ಚೆ ನಡೆದಿದೆ. Infact ರವೀಂದ್ರ ಕಲಾಕ್ಷೇತ್ರದಲ್ಲಿ ನನ್ನ Dance Performance ನೋಡಿಯೇ impress ಆಗಿ propose ಮಾಡಿದ್ದ. ಯಾವ ಕಾರಣಕ್ಕೆ ನನ್ನ ಇಷ್ಟ ಪಟ್ಟಿದ್ದನೋ, ಅದನ್ನೇ Continue ಮಾಡೋದು ಅವನಿಗಿಷ್ಟ ಇಲ್ಲ ಅಂತಿದಾನೆ. ಹಾಡೋದು ಭರತನಾಟ್ಯ ಅಂದರೆ ನನ್ನ ಉಸಿರು. ಬೇರೆ ಏನೇ ಹೇಳಿದ್ದರೂ ಮಾಡಿ ಬಿಡುತ್ತಿದೇನೆನೋ. ಆದರೆ ಅವನು ಕೇಳ್ತಾ ಇರೋದು ನನ್ನ ಉಸಿರನ್ನ. ಉಸಿರೇ ಇಲ್ಲದೇ ನಾನ್ ಹೇಗೆ ಬದುಕಲಿ? ಅದಕ್ಕೇ ಅವತ್ತೇ ನಿರ್ಧಾರ ಮಾಡಿ 'Lets Breakup' ಅಂತ ಅವನಿಗೆ ಹೇಳಿಯೇ ಬಿಟ್ಟೆ. ತಟ್ ಅಂತ "Better Option" ಅಂದವನ ಮಾತಲ್ಲಿ ಎಳ್ಳಷ್ಟೂ ಬೇಜಾರಿನ ಛಾಯೆಯೇ ಇರಲಿಲ್ಲ.

ಒಂದು ಕ್ಷಣಾನು ಅಲ್ಲಿರಲಾರದೆ ಅದೇ ಮಳೆಯಲ್ಲಿ ನನ್ನ Dioವನ್ನು ಮನೆ ಕಡೆ ತಿರುಗಿಸಿದ್ದೆ. ಅವನನ್ನು ಭೇಟಿ ಮಾಡಿದ ಮೊದಲ ದಿನದಿಂದಲೂ ಮನಸ್ಸಿನ ಒಂದು ಮೂಲೆಯಲ್ಲಿ 'ನಾವಿಬ್ಬರು ತದ್ವಿರುದ್ಧದವರು' ಅಂತ ಅನ್ನಿಸುತ್ತಲೇ ಇತ್ತು. ಇಬ್ಬರ ಅಭಿರುಚಿಗಳಲ್ಲಿ ಸಾಮ್ಯತೆ ಇರಲೇ ಇಲ್ಲ. ಮನಸ್ಸಿನ ತರ್ಕಕ್ಕೆ ಹೃದಯ ತಾಳ ಹಾಕಬೇಕಲ್ಲ. ನಮ್ಮಿಬ್ಬರದೊಂದು wonderful relationship ಅಂತ ಈ ಒಂದು ವರುಷದಲ್ಲಿ ನನಗೆ ಅನ್ನಿಸಿದ್ದು ತುಂಬಾನೇ ಕಡಿಮೆ. 'ಶರಧಿ, ನಿನ್ನದು ಒಳ್ಳೆ selection ಅಲ್ಲ' ಅನ್ನೋ ಆಂತರ್ಯದ ಸಣ್ಣ ಧ್ವನಿಗೆ ಈ ಮೊದಲು ಕಿವಿಗೊಡಲೇ ಇಲ್ಲ. 
ನನ್ನ ಕಣೀರು ಮಳೆ ಹನಿಯೊಂದಿದೆ ಒಂದಾಗಿ ನೆಲ ಸೇರುತ್ತಾ ಇತ್ತು. 

ನನ್ನೀ ಒಡೆದ ಕನಸುಗಳನ್ನ, ಈ ಒಂದು ವರುಷದಲ್ಲಿ ಅವನನ್ನ ಅದೆಷ್ಟು ಹಚ್ಚಿಕೊಂಡಿದ್ದೆ ಅನ್ನೋದನ್ನ, ನನ್ನ ಭವಿಷ್ಯದ ಕನಸುಗಳನ್ನ ಅವನೊಂದಿಗೆ ಹೆಣೆದಿದ್ದೇ ಅನ್ನೋದನ್ನ, He is my first crush, my first Love and first Regret of my Life ಅನ್ನೋ ನೋವನ್ನ ಬಹುಶ್ಯ ನಾನು ಯಾರತ್ರನೂ ಹೇಳಿಕೊಳ್ಳೋಕೆ ಆಗಲ್ಲ. ಮನೆ ಸೇರುವ ಹೊತ್ತಿಗೆ ಮಳೆಯಲ್ಲಿ ಸಂಪೂರ್ಣ ನೆನೆದು ಹೋಗಿದ್ದೆ, ಹಾಗೆ ನನ್ನ ಮನಸ್ಸೂ ಕೂಡ ದುಃಖದ ಮಡುವಲ್ಲಿ ಒದ್ದೆಯಾಗಿತ್ತು. ಬೇರೆ ಯಾರಿಗೇ ಗೊತ್ತಾಗದ್ದಿದ್ದರೂ, ಅಮ್ಮಂಗೆ ನಾನು ದುಃಖದಲ್ಲಿರೋದು ಗೊತ್ತಾಗದೇ ಇರತ್ತಾ? "ಏನಾಯ್ತು ಪುಟ್ಟಿ" ಅಂತ ಕೇಳಿದವಳನ್ನ ಹಾಗೆ ತಬ್ಬಿಕೊಂಡೆ. ದುಃಖ ಇನ್ನೂ ಉಮ್ಮಳಿಸಿ ಬಂತು. ಅಮ್ಮನಿಗೂ ಸಾಗರ್ ಬಗ್ಗೆ ಗೊತ್ತಿತ್ತು. ಯಾಕಂದರೆ ಅಮ್ಮನ ಹತ್ರ ನಾನು ಹೇಳದ ವಿಷಯವೇ ಇರಲಿಲ್ಲ. 

"ಹೋಗಲಿ ಬಿಡೋ, ನಿನ್ನಂತ ಹುಡುಗೀನ ಪಡೆಯೋಷ್ಟು ಅದೃಷ್ಟವಂತ ಅವನಲ್ಲ. ದೇವರು ಎಲ್ಲರಿಗೂ ಒಬ್ಬಬ್ಬರನ್ನ ಅಂತ ಬರೆದಿರ್ತಾನಂತೆ, ನಿನಗೂ ತಕ್ಕವನು ಸಿಕ್ತಾನೆ ಶಾರಿ. ನಂಗೊತ್ತು, ಮರೆತು ಬಿಡು ಅವನನ್ನ ಅಂತ ಹೇಳೋದು ತುಂಬಾ ಸುಲಭ, ಆದರೆ ನಿನಗೆ ತುಂಬಾ ಕಷ್ಟ ಆಗತ್ತೆ ಅಂತ. ಇನ್ನೊಂದೆರೆಡು ದಿನ ಅಷ್ಟೇ, ಇದರಿಂದ ಹೊರಗೆ ಬಂದೆ ಬರುತ್ತೀಯ. ಯೋಚನೆ ಮಾಡಬೇಡ, ಎಲ್ಲಾ ಕಾಲ ನಿರ್ಣಯ." ಅಮ್ಮ ಏನೇನೋ ಹೇಳುತ್ತಲೇ ಇದ್ದಳು. ಆದರೆ ಅದ್ಯಾವುದೂ ನನಗೆ ಸಮಾಧಾನವನ್ನೇ ಕೊಡುತ್ತಿರಲಿಲ್ಲ. ನಿಜ ಹೇಳಬೇಕೆಂದರೆ ಶಿಶಿರ್ ನನ್ನ ಜೀವನದಲ್ಲಿ ಬರುವ ಮುಂಚಿನಿಂದಲೇ ಅಮ್ಮ ನನ್ನ Best Friend. ಆದರೆ ಇವತ್ಯಾಕೋ, ಈ ಕ್ಷಣಕ್ಕೆ ಶಿಶಿರ್ ಇದ್ದಿದ್ದರೆ ಚನ್ನಾಗಿರ್ತಾ ಇತ್ತು ಅಂತ ತುಂಬಾ feel ಅಗ್ತಾ ಇತ್ತು. ಯಾಕೆ? ನಾನು ಹೇಳೋದನ್ನ, ನನ್ನ ಭಾವನೆಗಳನ್ನ ಅರ್ಥ ಮಾಡಿಕೊಳ್ಳೋಷ್ಟು ತಾಳ್ಮೆ ಅಥವಾ ಬುದ್ದಿವಂತಿಕೆ ಅವಳಿಗಿಲ್ಲ ಅಂತಾನಾ? ಗೊತ್ತಾಗ್ತಾ ಇಲ್ಲ.  

ನಂತರ 'ಎಲ್ಲಾ ಸರಿಹೋಗತ್ತೆ' ಅನ್ನೋ ಭರವಸೆಯ ನೋಟದೊಂದಿಗೆ ನನ್ನ roomಗೆ ನಡೆದೆ. ಆಮೇಲೆ ಶಿಶಿರ್ ಗೆ call ಮಾಡಿದೆ but receive ಮಾಡಲಿಲ್ಲ. ಮೈಯೆಲ್ಲಾ ಒದ್ದೆಯಾಗಿ ನಡುಗುತ್ತಿದ್ದರೂ, ಅದ್ಯಾಕೋ ನನ್ನ feelingsನ ಯಾರೊಂದಿಗಾದರೂ ಹೇಳಿಕೊಳ್ಳದೆ ಮನಸ್ಸಿಗೆ ಸಮಾಧಾನವೇ ಇರಲಿಲ್ಲ. ಆಗ ತಟ್ ಅಂತ ಹೊಳೆದದ್ದು; ನನ್ನ ಪ್ರತೀ ಭಾವನೆಯನ್ನ ಬಲ್ಲ, ಪ್ರತೀ ಖುಷಿಗೂ-ದುಃಖಕ್ಕೂ ಸಾಕ್ಷಿಯಾಗೋ ಕೇವಲ ನನ್ನದೇ ಆದ ನನ್ನ Dairy. Dairy-Pen ಹಿಡಿದು ಬರೆಯುತ್ತಿದ್ದವಳಿಗೆ ಅದೆಷ್ಟು pages ಬರೆದೆನೋ ತಿಳಿಯಲೇ ಇಲ್ಲ. ನನ್ನ ಪ್ರತೀ ಭಾವನೆಗೂ, ಪ್ರಶ್ನೆಗೂ, ನಿರಾಸೆಗೂ ನನ್ನ Pen ಉತ್ತರ ಕೊಡುತ್ತಿತ್ತು. 

                                                                            *****
                    
ಅದೆಷ್ಟೋ ಹೊತ್ತು dairy ಹಿಡಿದು ಕುಳಿತೇ ಇದ್ದವಳ ಕಣ್ಣಿಂದ ಹನಿಯೊಂದು ಹೊರ ಬಂದು ಅವಳ dairy ಯ ಪುಟದೊಂದಿಗೆ ಒಂದಾಯಿತು. ಸಮಯದ ಪರಿವೇ ಇಲ್ಲದೆ ಅದೆಷ್ಟೋ ಹೊತ್ತು Diary ಹಿಡಿದು ಕುಳಿತಿದ್ದಳೋ..... 

------

  ಅಲ್ಲಾವುದೋ ತೆರೆದ ಮನೆಯ ಕಿಟಕಿಯಿಂದ ಹೊರಬರುತ್ತಿದ್ದ ಎಚ್.ಎಸ್.ವೆಂಕಟೇಶ ಮೂರ್ತಿಯವರ ಭಾವನೆಗೆ ಬಣ್ಣ ಹಚ್ಚಿದಂತಿದ್ದ 
ಭಾವಗೀತೆಯೊಂದು ಕೇಳಿ ಬರುತ್ತಿತ್ತು... 
"ಎಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರು 
ಅರಿತೆವೇನು ನಾವು ನಮ್ಮ ಅಂತರಾಳವಾ? 
 ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯೂ 
                                      ನೀರಿನಾಳ ದೊರಕಿತೇನೋ ಹಾಯಿದೋಣಿಗೆ..."         

 ಕಿಟಕಿಯ ಆಚೆಗೂ ನನ್ನ ಹಾಗೆ ಯೋಚಿಸುತ್ತಿರುವ ಒಂದು ಜೀವ ಇರಬಹುದೇನೋ ಅನ್ನಿಸುತ್ತೆ...  

ಜೀವನದಲ್ಲಿ ಅದೆಷ್ಟೋ ಜನ ಪರಿಚಯ ಆಗಬಹುದು, ಅದೆಷ್ಟೋ ಜನ ಮನಸ್ಸಿಗೆ ತುಂಬಾ ಹತ್ತಿರವಾದವರು ಅಂತ ಅನ್ನಿಸುವವರು ಸಿಗಬಹುದು. ಆದರೆ at the end of the day ನಮಗೇ ಅಂತ ಕೊನೆಯಲ್ಲಿ ಉಳಿಯೋದು ನಾವು, ನಮ್ಮತನ, ನಮ್ಮ ಮನಸ್ಸು ಮಾತ್ರ. ಯಾಕೆಂದರೆ ಎಷ್ಟೋ ಸಲ ನಾವು ನಮ್ಮ ಮನಸ್ಸಿಗೆ ಬರೋ ಎಲ್ಲಾ ಭಾವನೆಗಳನ್ನ ಬೇರೆಯವರೊಂದಿಗೆ ಹಂಚಿಕೊಳ್ಳಲಾಗುವುದಿಲ್ಲ. ಕೆಲವೊಮ್ಮೆ ಎಷ್ಟೇ ಹೇಳಬೇಕು ಅಂತ ಅನ್ನಿಸಿದರೂ at the right time right person ಸಿಗದೇ ಹೋಗಬಹುದು or ಅವರು ಸಿಕ್ಕಾಗ ಆ ಭಾವನೆಯನ್ನ ಹೇಳಿಕೊಳ್ಳೋಕೆ ಪದಗಳೇ ಸಿಗದಿರಬಹುದು ಅಥವಾ ಪದಗಳು ಸಿಕ್ಕರೂ ಆ ಸಂದರ್ಭದಲ್ಲಿ ಆ ಭಾವನೆಗೆ ಅದೇ ಭಾವ ಇಲ್ಲದೇ ಇರಬಹುದು. ಯಾಕಂದರೆ  Every feeling has its own unseen expiry date. ಅದಕ್ಕೇ ಹೇಳಿದ್ದು ಪ್ರತಿಯೊಬ್ಬರಿಗೂ ಪ್ರತೀ ದಿನ, ಪ್ರತೀ ಕ್ಷಣ ಜೊತೆ ಇರೋದು ನಮ್ಮ ಮನಸ್ಸು ಮಾತ್ರ ಅಂತ.      

ನಿಮಗೆ ಯಾವಾಗಾದರೂ ಹೀಗೆ ಅನ್ನಿಸಿದ್ಯಾ?  


                         -ಮೇದಿನಿ. ಎಂ. ಭಟ್