Friday 24 March 2017

ಅವಳೆಂದರೆ...!!! ಸಂಚಿಕೆ ೩


ರಂಭೆ, ಊರ್ವಶಿ, ಮೇನಕೆ ಅಂತೆಲ್ಲ ತಿಲೋತ್ತಮ ಸುಂದರಿಯರನ್ನ ನನ್ಮುಂದೆನೇ ಅದೆಷ್ಟೋ ಜನ ಮಾತಾಡಿದ್ದನ್ನ ಕೇಳಿಸಿಕೊಂಡಿದ್ದೀನಿ. ಆದರೆ ನಾನು ಇವಳನ್ನ ನೋಡಿದೀನಿ. ಹಸಿರು ಜರಿಯಂಚಿನ ಆ ಕೆಂಪು ಸೀರೆಯನ್ನುಟ್ಟ ದಿನದಿಂದ ನಾ ಅವಳನ್ನ ನೋಡ್ತಾ ಇದೀನಿ. ಲೋಕಕ್ಕೆಲ್ಲಾ ಹುಣ್ಣಿಮೆ ಚಂದ್ರನ ದರ್ಶನ ತಿಂಗಳಿಗೊಮ್ಮೆಯಾದ್ರೆ, ಚಂದಿರನ ಮೊಗವುಳ್ಳ ಈ ಸುಂದರಿಯ ನಿತ್ಯದರ್ಶನ ಭಾಗ್ಯ ನನ್ನದು. ದಿನಾ ಅದೆಷ್ಟೇ ಜನರನ್ನ ನೋಡಿದರೂ ಇವಳಲ್ಲಿ ಎಲ್ಲರಿಗಿಂತ ಭಿನ್ನವಾದ ಅದೇನೋ ವಿಶೇಷತೆ ಇದೆ ಅನ್ನಿಸುತ್ತೆ. ಮೀನಿನಂತ ಅವಳ ಕಂಗಳಿಗೆ ಕಾಡಿಗೆಯ ತೀಡಿ, ಸೀರೆಗೊಪ್ಪುವ ಸಿಂಧೂರವ ಧರಿಸಿ ತುಟಿಯರಳಿಸಿ ನಕ್ಕಾಗ ಚುಕ್ಕಿ ತಾರೆಗಳೇ ನಾಚಿಯಾವು, ಇನ್ನು ನಾನು ಮರುಳಾಗುವುದು ಹೆಚ್ಚೇ...!?
ಹೀಗಂತ ಕನ್ನಡಿಯ ಹುಚ್ಚು ಕಲಾಪ ಒಂದೆಡೆ...      
--------

ಅವತ್ತಿಗೆ ಅಮ್ಮ ಸತ್ತು ೧೨ ದಿನ ಆಗಿತ್ತಷ್ಟೆ. ಅಪ್ಪನ್ನ ನೋಡಿದ ನೆನಪಂತೂ ಮೊದಲೇ ಇಲ್ಲ. ಅದ್ಯಾಕೋ ಆ ಮರದ ಪೆಟ್ಟಿಗೆಯಲ್ಲಿ ಜತನವಾಗಿಟ್ಟಿದ್ದ ಅಮ್ಮನ ಹಸಿರು ಜರಿಯಂಚಿನ ಆ ಕೆಂಪು ಸೀರೆ ಉಡಬೇಕೆನಿಸಿತ್ತು. ಅವತ್ತೇ ನಮ್ಮಮ್ಮನ ಸೋದರ ಸಂಬಂಧಿಯೊಬ್ಬ ಮನೆಗೆ ಬಂದಿದ್ದ. ನನ್ನ ಕಥೆ ನೋಡಿ ಕಣ್ಣೀರಾಗಿದ್ದ, ಅಥವಾ ಹಾಗೆ ನಟಿಸಿದ್ದು ಇರಬೇಕು. ಅಮ್ಮ ದುಡಿದು ತಂದಿಟ್ಟಿದ್ದ ಸಾಮಾನೆಲ್ಲ ನಿನ್ನೆಗೇ ಮುಗಿದುಹೋಗಿತ್ತು. ಇವತ್ತಿಂದ ಊಟಕ್ಕೆ ಏನ್ ಮಾಡಬೇಕು ಅನ್ನೋ ಕಲ್ಪನೆ ಕೂಡ ನನಗಿರಲಿಲ್ಲ. "ರಾಜಾಜಿನಗರದ ನಮ್ಮನೆಗೆ ಬಾ, ನಮ್ಮ ಫ್ಯಾಮಿಲಿ ಜೊತೇನೆ ಇರು" ಎಂದವನ ಮರು ಪ್ರಶ್ನಿಸದೆ ಲಗೇಜ್ ಪ್ಯಾಕ್ ಮಾಡಿ, ಮರುಭೂಮಿಯಲ್ಲಿ ಸಿಕ್ಕ ಓಯಾಸಿಸ್ ಹುಡುಕಿ ಹೊರಟಂತೆ ಅವನೊಂದಿಗೆ ಹೊರಟು ಬಿಟ್ಟಿದ್ದೆ. ಮತ್ತೆಂದೂ ನಾನು ನಾನಾಗಿ ಹೊರಬರಲಾರದೆ ಕೂಪವೊಂದಕ್ಕೆ ನನ್ನ ತಳ್ಳುತ್ತಾನೆ ಅನ್ನೋ ಕಲ್ಪನೇನಾದರೂ ಹೆಂಗಿರಬೇಕು ನನಗೆ. ಅದನ್ನೆಲ್ಲಾ ಯೋಚನೆ ಮಾಡೋ ವಯಸ್ಸು ಕೂಡ ನಂದಾಗಿರಲಿಲ್ಲ. ಅಮ್ಮನ ಸೀರೆ ಉಟ್ಟಿದ್ದ ಖುಷಿ ಒಂದೆಡೆಯಾದರೆ, ಎಲ್ಲೋ ಬೇರೆ ಕಡೆ ಹೋಗ್ತಿದೀನಿ ಅನ್ನೋ ಕುತೂಹಲ ಬೇರೆ. ಪೇಟೆಗೆ ಕರೆದುಕೊಂಡು ಹೋಗಿ ಮಕ್ಕಳಿಗಿಷ್ಟವಾಗಿದ್ದನ್ನ ಕೊಡಿಸಿ ಖುಷಿ ಪಡಿಸಿ ಮತ್ತೆ ಮನೆಗೆ ಕರೆದುಕೊಂಡು ಬರ್ತಾ ಇದ್ದ ಅಪ್ಪ-ಅಮ್ಮರನ್ನ ನೋಡಿ ಬೆಳೆದ ನನಗೆ ನನ್ನ ಕನಸು ನನಸಾದಂತಿತ್ತು. ಹೊಟ್ಟೆ ಕಿತ್ತು ಬರುವಷ್ಟು ಹಸಿವಾಗ್ತಾ ಇತ್ತು. ಅದಾವುದೋ ಇಕ್ಕಟ್ಟಾದ ಹೊಟೇಲಿನಂತಿದ್ದ ಸ್ಥಳಕ್ಕೆ ನನ್ನ ಕರೆದುಕೊಂಡು ಹೋದರು. ನಿಂಗೆ ಏನ್ ಬೇಕೋ ಅದನ್ನ ತಗೋ ಅಂದರು. ನಿಮಿಷಾರ್ಧದಲ್ಲಿ ಹೊಟ್ಟೆ ಸಂತೃಪ್ತಿಯ ಗಂಟೆ ಹೊಡೆದಿತ್ತು. ನಿಂಗೆ ಇದೇ ಹೋಟೆಲಿನ ರೂಮೊಂದರಲ್ಲಿ ಇರೋಕೆ ವ್ಯವಸ್ಥೆ ಮಾಡ್ತೀನಿ, ನೀ ಇಲ್ಲಿ ಆರಾಮವಾಗಿರಬಹುದೆಂದರು. ಆಸರೆ ಬಯಸಿದ್ದ ನನಗೆ ಯಾವುದಾದರೇನು ಅನ್ನಿಸ್ತು. ಅದಕ್ಕೇ ಹೂ ಅಂದೆ. ಅಷ್ಟೇ... ಮುಂದಿನದ್ದನ್ನ ನೆನಪಿಸಿಕೊಳ್ಳೋದಕ್ಕೂ ಇಷ್ಟ ಇಲ್ಲ ನಂಗೆ. ಹೀಗೆ ಸಾವಿರ ಕತೆಗಳನ್ನ ಹೇಳೋ ಡೈರಿಯ ಪುಟಗಳು ಇನ್ನೊಂದೆಡೆ.
-------

ನನ್ನಂತೆಯೇ ಬೇಕಾಗಿಯೋ, ಬೇಡದೇನೋ ಈ ಕೆಟ್ಟ ಕೂಪವೊಂದಕ್ಕೆ  ಬಂದು ಬೀಳೋ ಅದೆಷ್ಟೋ ಹೆಣ್ಮಕ್ಕಳಿಗೂ ಒಂದು ಮನಸ್ಸಿದೆ ಅಂತ ಅರ್ಥ ಆಗೋದೇ ಇಲ್ಲ. ಈ ಜಗತ್ತು ಕೂಡ ಒಂದು ಕನ್ನಡಿಯಿದ್ದಂತೆ. ದುಃಖದಲ್ಲಿದ್ದಾಗ, ನೋವಲ್ಲಿದ್ದಾಗ ನಾವ್ಯಾರಾದರೂ ಕನ್ನಡಿಯನ್ನ ನೋಡ್ತೀವಾ? ಇಲ್ಲವಲ್ಲ ? ಕನ್ನಡಿಗೆ ಹೇಗೆ ನಮ್ಮ ಇನ್ನೊಂದು ಮುಖದ ಅಥವಾ ನೋವುಗಳನ್ನ ತುಂಬಿಕೊಂಡಿರೋ ಮನಸ್ಸಿನ ಪರಿಚಯ ಇರುವುದಿಲ್ಲವೋ ಹಾಗೆ ಜಗತ್ತೂ ಕೂಡ.

ದಿನೇ ದಿನೇ ಬದಲಾಗೋ ಅತೀ ಹೆಚ್ಚು ಅಂತಾನೆ ಅನ್ನಿಸೋ ನನ್ನ ಬಣ್ಣ-ಬ್ಯಾಗಡೆ, ಬಿಂಕ ಬಿನ್ನಾಣಗಳನ್ನ ನೋಡಿ ನಮ್ಮ ಬೀದಿಯ ಕಿರಾಣಿ ಅಂಗಡಿಯವನಿಂದ ಹಿಡಿದು, ಶಾಲೆಯಿಂದ ಬರೋ ತಮ್ಮ ಮಕ್ಕಳನ್ನ ಕರೆದುಕೊಂಡು ಹೋಗೋಕೆ ಶಾಲಾ ವಾಹನಕ್ಕೆ ಕಾದು ನಿಂತಿರೋ ಅಮ್ಮಂದಿರು ನನ್ನ ನೋಡಿ ಅನುಮಾನದಿಂದ ಏನೋ ಗುಸುಗುಸುಮಾತಾಡುವಾಗ, ಪಡ್ಡೆ ಹುಡುಗರು ನನ್ನ ಕೆಕ್ಕರಿಸಿ ನೋಡುವಾಗ ನಂಗೆ ಗೊತ್ತಾಗೋಲ್ಲ ಅಂತನಾ? ಏನ್ಮಾಡ್ಲಿ ಸುಮ್ಮನಿರಬೇಕಾದ ಅನಿವಾರ್ಯತೆ ನಂದು. ಹಗಲೆಲ್ಲ ಒಮ್ಮೊಮ್ಮೆ ಊಟ ತಿಂಡಿನೂ ಮರೆತು ನಿದ್ದೆ ಮಾಡಬೇಕು. ನಮಗೆಲ್ಲ ಬೆಳಗಾಗೋದೇ ಸೂರ್ಯ ಮುಳುಗಿದ ಮೇಲಲ್ಲವೇ? ಹೆಣ್ಮಕ್ಕಳು ಒಬ್ಬೊಬ್ಬರೇ ಓಡಾಡುವ ಸಂದರ್ಭದಲ್ಲಿ  "ದೇವರೇ ಯಾವುದೇ ಗಂಡು ಪ್ರಾಣಿಯ ಕೆಟ್ಟ ದೃಷ್ಟಿಯ ನೆರಳೂ ಸಹ ತಾಕದಿರಲಿ" ಅಂತ ಅಂದುಕೊಳ್ಳುತ್ತಾರೆ. ಆದರೆ ನನ್ನಂತವರಿಗೆ ಅಧೋ ರಾತ್ರಿಯಲ್ಲಿ ಆ ಮೆಜೆಸ್ಟಿಕ್ ನ್ ಓಣಿಯಲ್ಲಿ ಯಾರಾದರೂ ನಮ್ಮನ್ನ ನೋಡಿ ಕರೆಯಲಿ ಅಂತ ಕಾಯಬೇಕಾದ ಅಸಹ್ಯ ಪರಿಸ್ಥಿತಿ. ಒಮ್ಮೊಮ್ಮೆ ಮನಸ್ಸು ನಲುಗಿ ಹೋಗತ್ತೆ. ಅದೆಷ್ಟು ಜನ ಸಿಕ್ತಾರೆ, ಅದೆಷ್ಟು ಜನ ಬರ್ತಾರೆ, ಆದರೆ "ಈ ಕೆಟ್ಟ ಸ್ಥಿತಿಯನ್ನ ಏಳೇಳು ಜನ್ಮಕ್ಕೂ ಕೊಡಬೇಡ" ಅಂತ ಬಿಕ್ಕಿ ಬಿಕ್ಕಿ ಅಳುವಾಗಲು ಕೂಡ ನಮಗೇ ಅಂತ ಸಮಾಧಾನ ಮಾಡೋಕೆ ನಮ್ಮ ಪಾಲಿಗೆ ಯಾರು ಉಳಿದಿರುವುದಿಲ್ಲ. ಆಗೆಲ್ಲ ಒಂಟಿತನ ತುಂಬಾನೇ ಕಾಡಿಬಿಡತ್ತೆ.
ಒಟ್ಟಾರೆ ಪ್ರಪಂಚದ ಕಣ್ಣಿಗೆ ನಾವು ಬೇಕಾದಾಗ ಉಪಯೋಗಿಸಿಕೊಂಡು, ಬೇಡವೆಂದಾಗ ಅಸಹ್ಯಪಡುವಂತ ಪ್ರತ್ಯೇಕ ಗುಂಪನ್ನಾಗಿಸೋ ಒಂತರ ಆಟದ ಬೊಂಬೆಯಂತೆ. ಕೀಲಿಕೊಟ್ಟವನು ಕೂಡ ಆ ಭಗವಂತನೇ ಅಲ್ಲ್ವಾ? ಯಾರನ್ನ ದೂರೋಕಾಗತ್ತೆ.? ವರ್ಷಕೊಮ್ಮೆ ನಮ್ಮ ಬೀದಿಯಲ್ಲಿ ನಡೆಯೋ ಗಣೇಶನ ಉತ್ಸವಕ್ಕೆ ಹೋಗೋದಕ್ಕೂ ಭಯ.ಮೈಲಿಗೆ ಆಗಿ ಬಿಟ್ಟರೆ ಅಂತ. ಹೆಣ್ತನ, ತಾಯ್ತನ ಯಾವುದರ ಖುಷಿಯಲ್ಲೂ ನನಗೆ ಪಾಲಿಲ್ಲ.

ನೀವೇ ಹೇಳಿ, ಯಾವ ಹೆಣ್ಣಿಗೆ ತಾನೇ ತಾನು ತಾಯಿ  ಆಗ್ತಾ ಇದೀನಿ ಅಂದಾಗ ಖುಷಿಯಾಗಲ್ಲ, ಅಬ್ಬಾ ನನ್ನ ಜನ್ಮ ಸಾರ್ಥಕ ಆಯಿತು ಅನ್ನಿಸೊಲ್ಲ? ಆದರೆ ಆ ಖುಷಿಯ ಭಾಗ್ಯ ನಂಗಿಲ್ಲವೇ. ಸಂಭ್ರಮಿಸಬೇಕಾಗಿದ್ದ ನನ್ನಪ್ಪ, ನನ್ನಮ್ಮ, ಅಕ್ಕನೋ, ಅಣ್ಣನೋ, ಕೊನೆಗೆ ಗಂಡ.. ಉಹುಂ ಯಾರಿಲ್ಲ ನನ್ನ ಪಾಲಿಗೆ. ಕೊನೆಪಕ್ಷ ಈ ಕರುಳ ಕುಡಿಗೆ ಅಪ್ಪ ಯಾರು ಅಂತ ಹೇಳೋ ಅದೃಷ್ಟನೂ ಇಲ್ಲ. ಹೋಗಲಿ ನಂಗಾದರು ಗೊತ್ತಾ ಯಾರು ಅಂತ? ಎಂತ ದರಿದ್ರ ಬದುಕಲ್ಲ್ವಾ ನಂದು. ಮೈಮಾರಿಕೊಂಡು ಜೀವನ ನಡೆಸೋ ಈ ಜೀವವನ್ನೆ ಒಂದೇ ಸಲ ಕೊಂದುಬಿಡೋಣ ಅಂದರೆ ಸಾವಿನ ಭಯ ಬಿಡುತ್ತಿಲ್ಲ, ಬದುಕಿನೆಡೆಗಿನ ಪ್ರೀತಿ ನಿಲ್ಲುತ್ತಿಲ್ಲ. ಆಗ ಹಸಿವು, ಬದುಕಲು ದುಡ್ಡು ಇದೆಲ್ಲ ಕಾರಣ ಇತ್ತು. ಆದರೆ ಇವತ್ತು ಅದ್ಯಾವುದೂ ಇಲ್ಲ. ಆದರೂ ಇದರಿಂದ ಹೊರಬಂದು ಜೀವಿಸೋಕಾಗ್ತಿಲ್ಲ. "ಸಾಕು ಇದೆಲ್ಲ ಬಿಟ್ಟು ಬಿಡೋಣ" ಅಂತ ನಿರ್ಧರಿಸಿ ಹೊರಟವಳನ್ನ ತಡೆದ ಈ ಲೋಕ ಅದೆಷ್ಟು ಕಂದಮ್ಮಗಳನ್ನ ಹುಟ್ಟೋ ಮುಂಚೆನೇ ಹೊಸಕಿ ಹಾಕೋಕೆ ದಾರಿ ಮಾಡಿಕೊಟ್ಟಿದೆಯೋ...

ಒಮ್ಮೊಮ್ಮೆ ಯಾವುದು ಸರಿ ಯಾವುದು ತಪ್ಪು, ನಾನು ನಡೆಯುತ್ತಿರುವ ದಾರಿ ಧರ್ಮದ್ದ ಅಥವಾ ಅಧರ್ಮದ್ದ ? ಯಾವುದನ್ನೂ ನಿರ್ಧರಿಸಲಾಗದ ಪರಿಸ್ಥಿತಿಯಲ್ಲಿ ಸಿಲುಕಿ ಒದ್ದಾಡುವಂತಾಗಿಬಿಡುತ್ತದೆ. ಸರಿ-ತಪ್ಪು ಸಾವು-ಬದುಕು ಇವೆಲ್ಲದರ ಜುಗಲ್ ಬಂದಿ ನಡುವೆ ಮನಸ್ಸು ನಲುಗಿದಾಗ ನಾನು ಈ ಮನೆಯಲ್ಲಿ ಇರೋದೇ ಇಲ್ಲ. ಆಗೆಲ್ಲಾ ನಾ ಹೋಗೋದು ಒಂದೇ ಸ್ಥಳಕ್ಕೆ. ನನ್ನಂತೆ ಬೀದಿಪಾಲಾಗಿದ್ದ ಮಕ್ಕಳಿಗೆ ಆಶ್ರಯ ನೀಡಬೇಕು ಅಂತ ನಾನೇ ಶುರುಮಾಡಿದ "ಆಸರೆ" ಅನಾಥಾಶ್ರಮದ ಮಡಿಲಿಗೆ. ಮನಸ್ಸಿಗೆ ಸಮಾಧಾನ ಸಿಗುವಷ್ಟು ಹೊತ್ತು ಅಲ್ಲಿದ್ದು ಬರುತ್ತೇನೆ. ನನ್ನೆಲ್ಲ ದುಃಖವನ್ನ ಮುಚ್ಚಿಡಲು ಮೇಕಪ್ ನ ಮೊರೆ ಹೋಗಿ ನಗುಮುಖದ ಮುಖವಾಡ ಧರಿಸಿ ಕನ್ನಡಿಯನ್ನೊಮ್ಮೆ ನೋಡಿದೆ. ಕನ್ನಡಿಯು ನನ್ನ ನೋಡಿ ನಕ್ಕಂತಾಯಿತು.

ಅವಳೆಂದರೆ... ಅದೆಷ್ಟೋ ಹೇಳಿಕೊಳ್ಳಲಾಗದ ರಹಸ್ಯಗಳನ್ನ ತನ್ನೊಡಲಲ್ಲಿ ಇಟ್ಟುಕೊಂಡು ಜೀವಿಸೋ ಗುಪ್ತಗಾಮಿನಿ.
ಅವಳೆಂದರೆ... ಬೀಸುವ ಬಿರುಗಾಳಿಗೆ ತರಗೆಲೆಯಂತಾಗದೆ ಜೀವನದ ಕಷ್ಟಗಳನ್ನ ಎದಿರಿಸೋದಕ್ಕೆ ಟೊಂಕ ಕಟ್ಟಿ ನಿಲ್ಲುವ ಅಪರಾಜಿತೆ...
ಅವಳೆಂದರೆ ತನ್ನತನವನ್ನೆಲ್ಲ ಬರಿದುಗೊಳಿಸೋ ಈ ಮಾನವ ಪ್ರಪಂಚದಲ್ಲಿ ಮತ್ತೆ ನೆನಪಾಗಿ ಉಳಿಯೋ ನಿತ್ಯ ಸಂಜೀವಿನಿ...
  
                     
 
               

No comments: